ಶಾರ್ಜಾ: ಹ್ಯಾಟ್ರಿಕ್ ಗೆಲುವಿನೊಂದಿಗೆ ಮುನ್ನುಗ್ಗಿರುವ ಇಂಗ್ಲೆಂಡ್ ಸೋಮವಾರದ ಟಿ20 ವಿಶ್ವಕಪ್‌ನಲ್ಲಿ ತೀವ್ರ ಒತ್ತಡದಲ್ಲಿರುವ ಶ್ರೀಲಂಕಾ ವಿರುದ್ಧ ಸೆಣೆಸಲಿದೆ.
ಮಾರ್ಗನ್ ಪಡೆ ಈ ಪಂದ್ಯ ಗೆದ್ದರೆ ಅಧಿ ಕೃತವಾಗಿ “ಎ’ ಗ್ರೂಪ್‌ನಿಂದ ಸೆಮಿ ಫೈನಲ್ ಪ್ರವೇಶ ಪಡೆಯಲಿದೆ. ಹಾಗೆಯೇ, ನಾಕೌಟ್ ರೇಸ್ ಜೀವಂತವಾಗಿರಬೇಕಾದರೆ ಶ್ರೀಲಂಕಾ ಗೆಲ್ಲುವುದು ಅನಿವಾರ್ಯ ಎಂಬ ಸ್ಥಿತಿ ಇದೆ.
ಇಂಗ್ಲೆಂಡ್ ಸಮರ್ಥ ತಂಡ: ಮೊದಲು ವೆಸ್ಟ್ ಇಂಡೀಸನ್ನು 55ಕ್ಕೆ ಉರುಳಿಸಿ, ಬಳಿಕ ಬಾಂಗ್ಲಾದೇಶವನ್ನು 124ಕ್ಕೆ ತಡೆದು ನಿಲ್ಲಿಸಿದ ಇಂಗ್ಲೆಂಡ್, ಶನಿವಾರ ಬದ್ಧ ಎದುರಾಳಿ ಆಸ್ಟ್ರೇಲಿಯವನ್ನು ಬಹಳ ಸುಲಭದಲ್ಲಿ ಬಲೆಗೆ ಬೀಳಿಸಿತ್ತು. ಹೀಗಾಗಿ ಲಂಕಾ ವಿರುದ್ಧವೂ ಮಾರ್ಗನ್ ಪಡೆಯೇ ಮೆಚ್ಚಿನ ತಂಡವಾಗಿದೆ. ಇಂಗ್ಲೆಂಡಿನ ಬ್ಯಾಟಿಂಗ್, ಬೌಲಿಂಗ್ ವಿಭಾಗವೆರಡೂ ಬಲಿಷ್ಠ ಮತ್ತು ವೈವಿಧ್ಯಮಯ ಎಂಬುದಕ್ಕೆ ಆಸ್ಟ್ರೇಲಿಯ ವಿರುದ್ಧದ ಪಂದ್ಯವೇ ಸಾಕ್ಷಿ. ಸಾಂಪ್ರದಾಯಿಕ ಎದುರಾಳಿಗಳ ಈ ಪಂದ್ಯ ಅತ್ಯಂತ ಪೈಪೋಟಿಯಿಂದ ಕೂಡಿರಲಿದೆ ಎಂಬ ನಿರೀಕ್ಷೆ ಇತ್ತಾದರೂ ಏಕಪಕ್ಷೀಯವಾಗಿ ಸಾಗಿ ಇಂಗ್ಲೆಂಡ್ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು. ಜೋಸ್ ಬಟ್ಲರ್, ಜೇಸನ್ ರಾಯ್, ಬೇರ್‌ಸ್ಟೊ ಸ್ಫೋಟಕ ಬ್ಯಾಟಿಂಗ್ ಲಯದಲ್ಲಿರುವುದು ಇಂಗ್ಲೆಂಡ್‌ಗೆ ಹೆಚ್ಚು ಬಲ ತಂದಿದೆ. ಮೊಯಿನ್ ಅಲಿ ಮತ್ತು ಲಿವಿಂಗ್‌ಸ್ಟೋನ್ ಆಲ್ ರೌಂಡ್ ವಿಭಾಗದ ಸ್ಟಾರ್ ಆಗಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್: ನಿರ್ಗಮನ ಬಾಗಿಲಲ್ಲಿ ನಿಂತ ಭಾರತ
ಒತ್ತಡದಲ್ಲಿ ಶ್ರೀಲಂಕಾ: ಶ್ರೀಲಂಕಾ ಪಾಲಿಗೆ ಇದು ಮಾಡು-ಮಡಿ ಪಂದ್ಯ. ಹೀಗಾಗಿ ಒತ್ತಡ ಹೆಚ್ಚು. ಆದರೆ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿದರೆ ಇಂಗ್ಲೆಂಡನ್ನು ಹೊಡೆದುರುಳಿಸುವ ತಾಕತ್ತು ಲಂಕೆಗೆ ಖಂಡಿತ ಇದೆ. ನಿಸ್ಸಂಕ ಮತ್ತು ಅಸಲಂಕ ಜತೆಗೆ ಉಳಿದವರ ಬ್ಯಾಟ್‌ನಿಂದಲೂ ರನ್ ಹರಿದು ಬರಬೇಕಾದುದು ಅತ್ಯಗತ್ಯ. ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತ ವನಿಂದು ಹಸರಂಗ ಅವರನ್ನು ಲಂಕಾ ಹೆಚ್ಚು ಅವಲಂಬಿಸಿದೆ. ಉಳಿದವರ ಸಾಮರ್ಥ್ಯ ಅಷ್ಟಕ್ಕಷ್ಟೇ. ಇಂಗ್ಲೆಂಡಿಗೆ ಹೋಲಿಸಿದರೆ ಲಂಕೆಯ ಬೌಲಿಂಗ್ ದುರ್ಬಲ. ಹೀಗಾಗಿ ಬ್ಯಾಟಿಂಗ್ ಮೂಲಕವೇ ಲಂಕಾ ಈ ಕೊರತೆಯನ್ನು ಹೋಗಲಾಡಿಸಿಕೊಳ್ಳಬೇಕಾದ ಅಗತ್ಯವಿದೆ.