ಕ್ಯಾಂಡಿ: ಶ್ರೀಲಂಕಾ ವಿರುದ್ಧದ ಕ್ಯಾಂಡಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ 57 ರನ್ನುಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಗೆಲುವಿಗೆ 301 ರನ್ನುಗಳ ಗುರಿ ಪಡೆದ ಲಂಕಾ, ಅಂತಿಮ ದಿನವಾದ ರವಿವಾರ 243ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಇದರೊಂದಿಗೆ ಇಂಗ್ಲೆಂಡ್ ಮೊದಲ ಬಾರಿಗೆ ವಿದೇಶಿ ಪ್ರವಾಸವೊಂದರ ವೇಳೆ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳನ್ನೆಲ್ಲ ಗೆದ್ದು ಮೆರೆದಂತಾಯಿತು. ಏಕದಿನದಲ್ಲಿ 3-1 ಜಯ ಗಳಿಸಿದ ಇಂಗ್ಲೆಂಡ್, ಅನಂತರ ಏಕೈಕ ಟಿ20 ಪಂದ್ಯದಲ್ಲೂ ಗೆದ್ದು ಬಂದಿತ್ತು.
ಇದು 2001ರ ಬಳಿಕ ಶ್ರೀಲಂಕಾ ನೆಲದಲ್ಲಿ ಇಂಗ್ಲೆಂಡ್ ಸಾಧಿಸಿದ ಮೊದಲ ಟೆಸ್ಟ್ ಸರಣಿ ಗೆಲುವು. ಏಶ್ಯದಲ್ಲಿ 2012ರ ಬಳಿಕ, ವಿದೇಶದಲ್ಲಿ 2015-16ರ ಬಳಿಕ ಒಲಿದ ಮೊದಲ ಸರಣಿ ಜಯವೂ ಹೌದು.
ಶ್ರೀಲಂಕಾ 7ಕ್ಕೆ 226 ರನ್ ಗಳಿಸಿದಲ್ಲಿಂದ ಅಂತಿಮ ದಿನದಾಟ ಮುಂದುವರಿಸಿತ್ತು. ಜಾಕ್ ಲೀಚ್ (83ಕ್ಕೆ 5) ಮತ್ತು ಮೊಯಿನ್ ಅಲಿ (72ಕ್ಕೆ 4) ಸೇರಿಕೊಂಡು ಲಂಕಾ ಇನ್ನಿಂಗ್ಸಿಗೆ ತೆರೆ ಎಳೆದರು. ಈ ಸಾಧನೆಯೊಂದಿಗೆ ಜೋ ರೂಟ್ ಶತಕ ಬಾರಿಸಿದ 15 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಅಜೇಯವಾಗಿ ಉಳಿದಂತಾಯಿತು. ಅವರ 11 ಶತಕಗಳ ವೇಳೆ ಇಂಗ್ಲೆಂಡ್ ಜಯಿಸಿತ್ತು, ಉಳಿದ 4 ಟೆಸ್ಟ್ ಡ್ರಾಗೊಂಡಿದ್ದವು.
ಸ್ಪಿನ್ನರ್‌ಗಳಿಗೆ 38 ವಿಕೆಟ್!
ಈ ಟೆಸ್ಟ್ ಪಂದ್ಯದ 38 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಉರುಳಿಸಿದ್ದೊಂದು ದಾಖಲೆ. 1969ರ ಭಾರತ-ನ್ಯೂಜಿಲ್ಯಾಂಡ್ ನಡುವಿನ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳು 37 ವಿಕೆಟ್ ಕೆಡವಿದ್ದು ಈವರೆಗಿನ ದಾಖಲೆಯಾಗಿತ್ತು. ವೇಗದ ಬೌಲರ್‌ಗಳು ಒಂದೂ ವಿಕೆಟ್ ಉರುಳಿಸದೆ ಇಂಗ್ಲೆಂಡ್ ಜಯ ಸಾಧಿಸಿದ ಕೇವಲ 3ನೇ ನಿದರ್ಶನ ಇದಾಗಿದೆ. ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್ ನ. 23ರಿಂದ ಕೊಲಂಬೊದಲ್ಲಿ ಆರಂಭವಾಗಲಿದೆ.