ಬರ್ಮಿಂಗ್‌ಹ್ಯಾಂ: ಕ್ರಿಕೆಟ್ ಜನಕರ ನಾಡೆಂದು ಖ್ಯಾತವಾಗಿರುವ ಇಂಗ್ಲೆಂಡ್ ಗುರುವಾರ ತನ್ನ ಸಂಪ್ರದಾಯವನ್ನೆಲ್ಲ ಬದಿಗೆ ಸರಿಸಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿಳಿಯಿತು. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿನ ಎಜ್‌ಬಾಸ್ಟನ್ ಅಂಗಳದಲ್ಲಿ ಗುಲಾಬಿ ಚೆಂಡಿನ ಸ್ಪರ್ಧೆ ಮೊದಲ್ಗೊಂಡಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಇಂಗ್ಲೆಂಡ್ 27 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 107 ರನ್ ಮಾಡಿ ದಿನದಾಟ ಮುಂದುವರಿಸಿತ್ತು. ಇದು ಟೆಸ್ಟ್ ಇತಿಹಾಸದ 5ನೇ ಹಗಲು ರಾತ್ರಿ ಪಂದ್ಯ.
ಇಂಗ್ಲೆಂಡಿನಲ್ಲಿ ಆಡಲಾಗುತ್ತಿರುವ, ಹಾಗೆಯೇ ಇಂಗ್ಲೆಂಡ್ ಆಡುತ್ತಿರುವ ಮೊದಲ ಹಗಲುರಾತ್ರಿ ಟೆಸ್ಟ್ ಎಂಬ ಕಾರಣಕ್ಕೆ ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸುದ್ದಿ ಮೂಡಿಸಿದೆ. ಎದುರಾಳಿ ವೆಸ್ಟ್ ಇಂಡೀಸಿಗೆ ಇದು 2ನೇ ಹಗಲು-ರಾತ್ರಿ ಟೆಸ್ಟ್. ಇದಕ್ಕೂ ಮುನ್ನ ಕೆರಿಬಿಯನ್ ತಂಡ ಕಳೆದ ವರ್ಷ ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಹಗಲುರಾತ್ರಿ ಟೆಸ್ಟ್ ಆಡಿ 56ರನ್ನುಗಳ ಸೋಲನುಭವಿಸಿತ್ತು. ಈವರೆಗೆ ಹಗಲುರಾತ್ರಿಯಲ್ಲಿ ಟೆಸ್ಟ್ ಪಂದ್ಯ ವಾಡಿದ ಉಳಿದ ತಂಡಗಳೆಂದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ. ಈವರೆಗಿನ 4 ಹಗಲು-ರಾತ್ರಿ ಟೆಸ್ಟ್ ಗಳಲ್ಲಿ ಆಸ್ಟ್ರೇಲಿಯಾ
ಅತೀ ಹೆಚ್ಚು ಮೂರರಲ್ಲಿ ಕಾಣಿಸಿಕೊಂಡಿದೆ. ಮೂರನ್ನೂ ಗೆದ್ದಿದೆ. ಭಾರತವಿನ್ನೂ ಹಗಲುರಾತ್ರಿ ಟೆಸ್ಟ್‌ನಲ್ಲಿ ಪಾಲ್ಗೊಂಡಿಲ್ಲ. ಮುಂದಿನ ವೇಳಾಪಟ್ಟಿಯಲ್ಲೂ ಇದರ ಪ್ರಸ್ತಾವವಿಲ್ಲ. ಶ್ರೀಲಂಕಾ ಇದೇ ಅಕ್ಟೋಬರ್‌ನಲ್ಲಿ ಪಾಕಿಸ್ಥಾನ ವಿರುದ್ಧ ದುಬಾೖಯಲ್ಲಿ ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡಲಿದೆ.
ವರ್ಷಾಂತ್ಯದ ಆ್ಯಶಸ್ ಸರಣಿಯ ಅಡಿಲೇಡ್ ಟೆಸ್ಟ್ ಡೇ-ನೈಟ್ ಆಗಿ ಸಾಗಲಿದೆ. ಮುಂದಿನ ಮಾರ್ಚ್‌ನಲ್ಲಿ ನ್ಯೂಜಿಲ್ಯಾಂಡ್-ಇಂಗ್ಲೆಂಡ್ ನಡುವಿನ ಆಕ್ಲೆಂಡ್ ಕೂಡ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ವಿಶ್ವದ ಮೊಟ್ಟಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾದ ಅಂಗಳ “ಅಡಿಲೇಡ್ ಓವಲ್’. 2015ರ ಕೊನೆಯಲ್ಲಿ ಆಸ್ಟ್ರೇಲಿಯ- ನ್ಯೂಜಿಲ್ಯಾಂಡ್ ಈ ಪಂದ್ಯದಲ್ಲಿ ಮುಖಾಮುಖೀಯಾಗಿದ್ದವು. ಆಸೀಸ್ ಇದನ್ನು 3 ವಿಕೆಟ್‌ಗಳಿಂದ ಗೆದ್ದಿತ್ತು.