ಲಂಡನ್: ಕೋವಿಡ್ ಸೋಂಕಿತರಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಪರಿಸ್ಥಿತಿ ಕೈಮೀರಿದೆ ಎಂಬ ಅರಿವಿತ್ತು. ವೈದ್ಯರು ನನ್ನ ಸಾವಿನ ಘೋಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಬ್ರಿಟನ್‌ನ ‘ದಿ ಸನ್’ ಪತ್ರಿಕೆಗೆ ಭಾನುವಾರ ಸಂದರ್ಶನ ನೀಡಿರುವ ಅವರು, ಕೋವಿಡ್ ಸೋಂಕಿತರಾಗಿದ್ದಾಗ ಎದುರಿಸಿದ ಸನ್ನಿವೇಶ ಕಠಿಣ ಕ್ಷಣಗಳಾಗಿದ್ದವು. ಇದರಿಂದ ಪಾರಾಗುವುದು ಹೇಗೆ ಎಂದು ಚಿಂತಿಸುತ್ತಿದ್ದೆ.
ಆದರೆ, ಸಾಯುತ್ತೇನೆ ಎಂದು ಯೋಚಿಸಲಿಲ್ಲ, ಐಸಿಯುನಲ್ಲಿ ನನಗೆ ಲೀಟರ್‌ಗಟ್ಟಲೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಆಗ ನಿರಾಶೆಗೊಂಡಿದ್ದೆ. ಆಕ್ಸಿಜನ್ ವ್ಯವಸ್ಥೆಯಲ್ಲಿ ನನ್ನನ್ನು ಇಡಬೇಕಾ ಎಂಬ ಬಗ್ಗೆ ವೈದ್ಯರು ಚರ್ಚಿಸುತ್ತಿದ್ದಾಗ ನನಗೆ ವಾಸ್ತವ ಅರಿವಾಯಿತು.
ಈ ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಏನು ಮಾಡಬೇಕು ಎಂದು ವೈದ್ಯರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅಂದು ಸಾವಿನ ಘೋಷಣೆ ಮಾಡಲು ತಯಾರಿ ನಡೆಯುತ್ತಿದೆ ಎಂಬುದು ನನಗೆ ಅರಿವಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ನನಗೆ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕೋವಿಡ್ ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿದ್ದು ಎಂದಿಗೂ ಮರೆಯಲಾರದ ಕ್ಷಣ ಎಂದು ಬ್ರಿಟನ್ ಪ್ರಧಾನಿ ಆಸ್ಪತ್ರೆ ವಾಸದ ಕ್ಷಣಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಪುತ್ರನಿಗೆ ವೈದ್ಯರ ಹೆಸರು?
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಗೆಳತಿ ಕ್ಯಾರಿ ಸೈಮಂಡ್ಸ್ ಜೋಡಿಗೆ ಜನಿಸಿದ ಪುತ್ರನಿಗೆ ವಿಲ್‌ಫ್ರೆಡ್ ಲಾವ್ರಿ ‘ನಿಕೋಲಸ್’ ಜಾನ್ಸನ್ ಎಂದು ನಾಮಕರಣ ಮಾಡಲಾಗಿದೆ.
ಕೋವಿಡ್ ವೈರಸ್ ಬಾಧಿತರಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬೋರಿಸ್ ಜಾನ್ಸನ್‌ಗೆ ಇಬ್ಬರು ವೈದ್ಯರಾದ ಡಾ| ನಿಕ್ ಪ್ರಿನ್ಸ್ ಹಾಗೂ ಡಾ|ನಿಕ್ ಹಾರ್ಟ್ ಚಿಕಿತ್ಸೆ ನೀಡಿದ್ದರು. ಅವರ ಹೆಸರನ್ನು ಪುತ್ರನಿಗೆ ಇರಿಸಲಾಗಿದೆ. ಫೋಟೋವನ್ನು ಜಾನ್ಸನ್ ಗೆಳತಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.