ಲಂಡನ್: ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಬಳಿಕ ಮಿಕ್ ಹಂಟ್ ತಮ್ಮ ವೃತ್ತಿಗೆ ವಿದಾಯ ಘೋಷಿಸಲಿದ್ದಾರೆ.
ಯಾರಿದು ಮಿಕ್ ಹಂಟ್, ಇಂಗ್ಲೆಂಡ್ ತಂಡದ ಕ್ರಿಕೆಟಿಗನಂತೂ ಅಲ್ಲ, ಮತ್ತೆ ಯಾರು… ಎಂಬೆಲ್ಲ ಪ್ರಶ್ನೆಗಳು ಈ ಸಂದರ್ಭದಲ್ಲಿ ಕಾಡುವುದು ಸಹಜ.
ಮಿಕ್ ಹಂಟ್ ಲಾರ್ಡ್ಸ್ ಅಂಗಳದ ಹೆಡ್ ಗ್ರೌಂಡ್ಸ್‌ಮ್ಯಾನ್. ಇವರದು ಸುದೀರ್ಘ 49 ವರ್ಷಗಳ ಕಾಯಕ. 1969ರಲ್ಲಿ ಈ ಹುದ್ದೆಗೆ ಆಗಮಿಸಿದ ಹಂಟ್, ಕಳೆದ 33 ವರ್ಷಗಳಿಂದ ಪ್ರಧಾನ ಗ್ರೌಂಡ್ಸ್‌ಮ್ಯಾನ್ ಹುದ್ದೆಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಇವರ ಉಸ್ತುವಾರಿಯಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಳದ ಪಿಚ್‌ಗಳು ನಿರ್ಮಾಣಗೊಂಡಿದ್ದು, ಈ ವರೆಗೆ ಯಾವುದೇ ಟೀಕೆಗೆ ಒಳಗಾಗಿಲ್ಲ.
ಮಿಡ್ಲ್ಸೆಕ್ಸ್ ತಂಡದ ವಿಕೆಟ್ ಕೀಪರ್ ಆಗಿದ್ದ ಹಂಟ್ ಅವರಿಗೆ ಇಲ್ಲಿಂದ ಮೇಲೇರಲಾಗಲಿಲ್ಲ. ಬದಲಿಗೆ ಗ್ರೌಂಡ್-ಸ್ಟಾಫ್ ಹುದ್ದೆಯಲ್ಲಿ ಆಸಕ್ತಿ ತೋರಿದರು.
“ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಅದೆಷ್ಟೋ ವಿದೇಶಿ ಕ್ರಿಕೆಟ್ ನಾಯಕರು ಇಲ್ಲಿನ ಪಿಚ್ ಬಗ್ಗೆ ಸದಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ತಂಡವೇ ಇಲ್ಲಿ ಗೆಲ್ಲುತ್ತ ಬಂದಿದೆ…’ ಎಂಬುದಾಗಿ ನಿವೃತ್ತಿಯ ಸಂದರ್ಭದಲ್ಲಿ ಹಂಟ್ ಹೇಳಿದ್ದಾರೆ.
“ಮುಂದಿನ ವರ್ಷ ಇಲ್ಲಿ ಪ್ರತಿಷ್ಠಿತ ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ಆ್ಯಶಸ್ ಸರಣಿಯೂ ಇದೆ. ಈ ಸಂದರ್ಭದಲ್ಲೂ ಕರ್ತವ್ಯ ನಿಭಾಯಿಸಬೇಕೆಂಬುದು ನನ್ನ ಅಭಿಲಾಷೆಯಾದರೂ ಆರೋಗ್ಯ ಸಹಕರಿಸುತ್ತಿಲ್ಲ. ವಿದಾಯಕ್ಕೆ ಇದು ಸೂಕ್ತ ಸಮಯವಾಗಿದೆ…’ ಎಂದಿದ್ದಾರೆ ಹಂಟ್.