ಲಂಡನ್: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಪ್ರಥಮ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡಿನ ಅನುಭವಿ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಟ್ಟದ್ದು ದೊಡ್ಡ ಸುದ್ದಿಯಾಗಿತ್ತು.
ಸೌತಾಂಪ್ಟನ್‌ನಲ್ಲಿ ಆಡಲಾದ ಈ ಪಂದ್ಯದಲ್ಲಿ ಆ್ಯಂಡರ್ಸನ್, ಆರ್ಚರ್ ಮತ್ತು ವುಡ್ ಅವರನ್ನು ಆಡಿಸಲಾಗಿತ್ತು. ಬ್ರಾಡ್ ಅವರ ಸತತ 51 ತವರಿನ ಟೆಸ್ಟ್ ಪಂದ್ಯಗಳ ಓಟಕ್ಕೆ ಬ್ರೇಕ್ ಬಿದ್ದಿತ್ತು.
‘ಈ ಪಂದ್ಯದಲ್ಲಿ ನೀವು ಆಡುತ್ತಿಲ್ಲ ಎಂದು ಸ್ಟೋಕ್ಸಿ (ಬೆನ್ ಸ್ಟೋಕ್ಸ್) ನನ್ನಲ್ಲಿ ಬಂದು ಹೇಳಿದಾಗ ನಾನು ನೆಲಕ್ಕೆ ಕುಸಿದಿದ್ದೆ. ಮೈಯೆಲ್ಲ ನಡುಗಲಾರಂಭಿಸಿತ್ತು. ಏನು ಪ್ರತಿಕ್ರಿಯಿಸಬೇಕೆಂದೇ ತೋಚಲಿಲ್ಲ. ಆಗ ನನ್ನ ತಲೆಯಲ್ಲಿ ನಿವೃತ್ತಿಯ ವಿಚಾರ ಹರಿದು ಹೋಗಿತ್ತೇ ಎಂದು ಕೇಳಿದರೆ ಹೌದು ಎನ್ನುತ್ತೇನೆ. ಜೈವಿಕ ಸುರಕ್ಷಾ ವಲಯವಾದ್ದರಿಂದ ಹೊಟೇಲಿನ ಕೊಠಡಿಯಲ್ಲಿ ನಾನು ಏಕಾಂಗಿಯಾಗಿ ಉಳಿಯಬೇಕಿತ್ತು. ಆಗ ಕ್ರಿಕೆಟಿಗೆ ಗುಡ್‌ಬೈ ಹೇಳುವ ಕುರಿತು ಚಿಂತಿಸಿದ್ದೆ’ ಎಂಬುದಾಗಿ ಬ್ರಾಡ್ ಹೇಳಿದರು.
ಈಗ 500 ವಿಕೆಟ್ ಸಾಧಕ
ಮುಂದಿನದ್ದೆಲ್ಲ ಇತಿಹಾಸ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದ ಬ್ರಾಡ್ ಆಲ್‌ರೌಂಡ್ ಸಾಹಸದ ಮೂಲಕ ಸರಣಿಯನ್ನು ಸಮಬಲಕ್ಕೆ ತಂದರೆ, ಅಂತಿಮ ಟೆಸ್ಟ್‌ನಲ್ಲಿ 500 ವಿಕೆಟ್‌ಗಳ ಸಾಧಕನಾಗಿ ಮೂಡಿಬಂದರು. ಹಾಗಾದರೆ ಬ್ರಾಡ್ ಗುರಿ 600 ವಿಕೆಟ್ ಆಗಿರಬಹುದೇ?
‘600 ವಿಕೆಟ್ ಉರುಳಿಸಬಲ್ಲೆನೆಂಬ ವಿಶ್ವಾಸ ನನಗಿದೆ. ಆ್ಯಂಡರ್ಸನ್ ಈಗ 600ರ ಗಡಿಯಲ್ಲಿದ್ದಾರೆ. 500 ವಿಕೆಟ್ ಉರುಳಿಸುವಾಗ ಅವರಿಗೆ 35 ವರ್ಷ, ಒಂದು ತಿಂಗಳಾಗಿತ್ತು. ನನಗೀಗ 34 ವರ್ಷ ಮತ್ತು ಒಂದು ತಿಂಗಳು…’ ಎಂದು ಸ್ಟುವರ್ಟ್ ಬ್ರಾಡ್ ‘ಸರಳ ಲೆಕ್ಕಾಚಾರ’ವೊಂದನ್ನು ಮುಂದಿಟ್ಟರು!