Advertisement

360 ರನ್‌ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್‌

12:30 AM Feb 22, 2019 | Team Udayavani |

ಬ್ರಿಜ್‌ಟೌನ್‌: ನಿವೃತ್ತಿಯ ಸೂಚನೆ ನೀಡಿದ ಕ್ರಿಸ್‌ ಗೇಲ್‌ ಅವರ ಸ್ಫೋಟಕ ಶತಕದಿಂದ ರಂಗೇರಿಸಿಕೊಂಡರೂ ಪ್ರವಾಸಿ ಇಂಗ್ಲೆಂಡ್‌ ಎದುರಿನ ಬೃಹತ್‌ ಮೊತ್ತದ ಏಕದಿನ ಸೆಣಸಾಟದಲ್ಲಿ ವೆಸ್ಟ್‌ ಇಂಡೀಸ್‌ 6 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.

Advertisement

ಬುಧವಾರ ಇಲ್ಲಿನ “ಕೆನ್ಸಿಂಗ್ಟನ್‌ ಓವಲ್‌’ನಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 8 ವಿಕೆಟಿಗೆ 360 ರನ್‌ ಬಾರಿಸಿ ಸವಾಲೊಡ್ಡಿತು. ಇದನ್ನು ದಿಟ್ಟ ರೀತಿಯಲ್ಲಿ ಸ್ವೀಕರಿಸಿದ ಇಂಗ್ಲೆಂಡ್‌ 48.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 364 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.
ಈ ಪಂದ್ಯ ಒಟ್ಟು 3 ಶತಕಗಳಿಗೆ ಸಾಕ್ಷಿಯಾಯಿತು. ಮೊದಲು ಕ್ರಿಸ್‌ ಗೇಲ್‌ 129 ಎಸೆತಗಳಿಂದ 135 ರನ್‌ ಬಾರಿಸಿದರು (12 ಸಿಕ್ಸರ್‌, 3 ಬೌಂಡರಿ). ಬಳಿಕ ಚೇಸಿಂಗ್‌ ವೇಳೆ ಜಾಸನ್‌ ರಾಯ್‌ 85 ಎಸೆತಗಳಿಂದ 123 ರನ್‌ (15 ಬೌಂಡರಿ, 3 ಸಿಕ್ಸರ್‌) ಮತ್ತು ನಾಯಕ ಜೋ ರೂಟ್‌ 97 ಎಸೆತಗಳಿಂದ 102 ರನ್‌ (9 ಬೌಂಡರಿ) ಸಿಡಿಸಿ ಇಂಗ್ಲೆಂಡನ್ನು ದಡ ಮುಟ್ಟಿಸಿದರು. ಈ ಪಂದ್ಯದಲ್ಲಿ ಒಟ್ಟು 29 ಸಿಕ್ಸರ್‌, 58 ಬೌಂಡರಿ ಸಿಡಿಯಲ್ಪಟ್ಟಿತು! ರಾಯ್‌-ರೂಟ್‌ 2ನೇ ವಿಕೆಟಿಗೆ 114 ರನ್‌, ರೂಟ್‌-ಮಾರ್ಗನ್‌ 3ನೇ ವಿಕೆಟಿಗೆ 116 ರನ್‌ ಪೇರಿಸಿ ಕೆರಿಬಿಯನ್‌ ಬೌಲರ್‌ಗಳನ್ನು ಕಾಡಿದರು.

ಗೇಲ್‌ ಸಿಕ್ಸರ್‌ ದಾಖಲೆ
ಎಂದಿನ ಸಿಡಿಲಬ್ಬರದ ಬ್ಯಾಟಿಂಗ್‌ 
ಪ್ರದರ್ಶಿಸಿದ ಕ್ರಿಸ್‌ ಗೇಲ್‌ 24ನೇ ಶತಕದೊಂದಿಗೆ ಭರ್ಜರಿ ಪುನರಾಗಮನ ಸಾರಿದರು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ಸಿಕ್ಸರ್‌ ಬಾರಿಸಿದ ಶಾಹಿದ್‌ ಅಫ್ರಿದಿ ದಾಖಲೆಯನ್ನು ಮುರಿದರು. ಗೇಲ್‌ ಅವರ ಒಟ್ಟು ಸಿಕ್ಸರ್‌ ಗಳಿಕೆ ಈಗ 488ಕ್ಕೆ ಏರಿದೆ. ಇದು ಅವರ 444ನೇ ಅಂತಾರಾಷ್ಟ್ರೀಯ ಪಂದ್ಯ. ಟೆಸ್ಟ್‌ನಲ್ಲಿ 98, ಏಕದಿನದಲ್ಲಿ 287 ಹಾಗೂ ಟಿ20ಯಲ್ಲಿ 103 ಸಿಕ್ಸರ್‌ ಬಾರಿಸಿದ ಸಾಧನೆ ಗೇಲ್‌ ಅವರದಾಗಿದೆ. ಅಫ್ರಿದಿ 524 ಪಂದ್ಯಗಳಿಂದ 476 ಸಿಕ್ಸರ್‌ ಹೊಡೆದಿ ದ್ದಾರೆ. 398 ಸಿಕ್ಸರ್‌ ಸಿಡಿಸಿರುವ ಬ್ರೆಂಡನ್‌ ಮೆಕಲಮ್‌ ಅವರಿಗೆ 3ನೇ ಸ್ಥಾನ. ಅನಂತ ರದ ಸ್ಥಾನದಲ್ಲಿರುವವರೆಂದರೆ ಸನತ್‌ ಜಯ ಸೂರ್ಯ (352) ಮತ್ತು ರೋಹಿತ್‌ ಶರ್ಮ (349).

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-8 ವಿಕೆಟಿಗೆ 360 (ಗೇಲ್‌ 135, ಹೋಪ್‌ 64, ಡ್ಯಾರನ್‌ ಬ್ರಾವೊ 40, ಸ್ಟೋಕ್ಸ್‌ 37ಕ್ಕೆ 3, ರಶೀದ್‌ 74ಕ್ಕೆ 3, ವೋಕ್ಸ್‌ 59ಕ್ಕೆ 2). ಇಂಗ್ಲೆಂಡ್‌-48.4 ಓವರ್‌ಗಳಲ್ಲಿ 4 ವಿಕೆಟಿಗೆ 364 (ರಾಯ್‌ 123, ರೂಟ್‌ 102, ಮಾರ್ಗನ್‌ 65, ಹೋಲ್ಡರ್‌ 63ಕ್ಕೆ 2). ಪಂದ್ಯಶ್ರೇಷ್ಠ: ಜಾಸನ್‌ ರಾಯ್‌.

Advertisement

Udayavani is now on Telegram. Click here to join our channel and stay updated with the latest news.

Next