Advertisement
ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಹಾಗೂ ಭಾರೀ ಮೊತ್ತದಿಂದ ರಂಗೇರಿಸಿಕೊಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 6 ವಿಕೆಟಿಗೆ 418 ರನ್ ಪೇರಿಸಿತು. ಇದು ಏಕದಿನದ 10ನೇ ಅತೀ ಹೆಚ್ಚಿನ ಸ್ಕೋರ್. ಹಾಗೆಯೇ ವೆಸ್ಟ್ ಇಂಡೀಸ್‌ನಲ್ಲಿ ದಾಖಲಾದ ಅತ್ಯಧಿಕ ಗಳಿಕೆ. ಗೇಲ್ ಸಾಹಸದಿಂದ ದಿಟ್ಟ ರೀತಿಯಲ್ಲಿ ಇದನ್ನು ಬೆನ್ನಟ್ಟಿಕೊಂಡು ಹೋದ ವಿಂಡೀಸ್ ಅಂತಿಮವಾಗಿ 48 ಓವರ್‌ಗಳಲ್ಲಿ 389ಕ್ಕೆ ಆಲೌಟ್ ಆಯಿತು. ಇದು ಏಕದಿನದಲ್ಲಿ ವಿಂಡೀಸಿನ ಸರ್ವಾಧಿಕ ಸ್ಕೋರ್ ಆಗಿದೆ.ಆದಿಲ್ ರಶೀದ್ 48ನೇ ಓವರಿನಲ್ಲಿ ಕೊನೆಯ ನಾಲ್ಕೂ ವಿಕೆಟ್ ಉರುಳಿಸಿ ಇಂಗ್ಲೆಂಡಿನ ಜಯಭೇರಿ ಸಾರಿದರು. ಇದರೊಂದಿಗೆ ಇಂಗ್ಲೆಂಡ್ 2-1 ಮುನ್ನಡೆ ಸಾಧಿಸಿದೆ.
35ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಕ್ರಿಸ್ ಗೇಲ್ 97 ಎಸೆತಗಳಿಂದ 162 ರನ್ ಬಾರಿಸಿ ವಿಂಡೀಸಿನ ಗೆಲುವಿನ ಸಾಧ್ಯತೆಯನ್ನು ತೆರೆದಿಟ್ಟರು. ಬಳಿಕ ಇಂಗ್ಲೆಂಡ್ ಬೌಲರ್‌ಗಳ ಕೈ ಮೇಲಾಯಿತು. ಗೇಲ್ ಅವರ ಈ ಬ್ಯಾಟಿಂಗ್ ಅಬ್ಬರದ ವೇಳೆ 14 ಸಿಕ್ಸರ್ ಹಾಗೂ 11 ಬೌಂಡರಿ ಸಿಡಿಯಲ್ಪಟ್ಟಿತು. ಇದು ಕ್ರಿಸ್ ಗೇಲ್ ಅವರ 25ನೇ ಏಕದಿನ ಶತಕವಾಗಿದ್ದು, 55 ಎಸೆತಗಳಲ್ಲಿ ಬಂತು. ಈ ಸಾಹಸದ ವೇಳೆ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿದರು. ಏಕದಿನದಲ್ಲಿ ಅವರ ಸಿಕ್ಸರ್ ಗಳಿಕೆ 305ಕ್ಕೆ ಏರಿತು. ಈ ಯಾದಿಯಲ್ಲಿ ಅವರಿಗೆ 2ನೇ ಸ್ಥಾನ. ಶಾಹಿದ್ ಅಫ್ರಿದಿ ಟಾಪ್‌ನಲ್ಲಿದ್ದಾರೆ (351 ಸಿಕ್ಸರ್).
Related Articles
Advertisement
ಮಾರ್ಗನ್, ಬಟ್ಲರ್ ಶತಕಇಂಗ್ಲೆಂಡಿನ ದೊಡ್ಡ ಮೊತ್ತಕ್ಕೆ ಕಾರಣವಾದದ್ದು ನಾಯಕ ಇಯಾನ್ ಮಾರ್ಗನ್ ಮತ್ತು ಕೀಪರ್ ಜಾಸ್ ಬಟ್ಲರ್ ಬಾರಿಸಿದ ಶತಕ. ಬಟ್ಲರ್ ಬರೀ 77 ಎಸೆತಗಳನ್ನೆದುರಿಸಿ 150 ರನ್ ಹೊಡೆದರೆ (13 ಬೌಂಡರಿ, 12 ಸಿಕ್ಸರ್), ಮಾರ್ಗನ್ 88 ಎಸೆತಗಳಿಂದ 103 ರನ್ ಹೊಡೆದರು (8 ಬೌಂಡರಿ, 6 ಸಿಕ್ಸರ್). ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-6 ವಿಕೆಟಿಗೆ 418 (ಬಟ್ಲರ್ 150, ಮಾರ್ಗನ್ 103, ಹೇಲ್ಸ್ 82, ಬೇರ್‌ಸ್ಟೊ 56, ಬ್ರಾತ್‌ವೇಟ್ 69ಕ್ಕೆ 2, ಥಾಮಸ್ 84ಕ್ಕೆ 2). ವೆಸ್ಟ್ ಇಂಡೀಸ್-48 ಓವರ್‌ಗಳಲ್ಲಿ 389 (ಗೇಲ್ 162, ಬ್ರಾವೊ 61, ಬ್ರಾತ್‌ವೇಟ್ 50, ರಶೀದ್ 85ಕ್ಕೆ 5, ವುಡ್ 60ಕ್ಕೆ 4). ಪಂದ್ಯಶ್ರೇಷ್ಠ: ಜಾಸ್ ಬಟ್ಲರ್. 5ನೇ ಪಂದ್ಯ ಶನಿವಾರ ಸೇಂಟ್ ಲೂಸಿಯಾದಲ್ಲಿ ನಡೆಯಲಿದೆ.