ಲೀಡ್ಸ್ : ಇಲ್ಲಿನ ಹೇಡಿಂಗ್ಲೆ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್ 3 ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್‌ಗೆ ವೈಟ್‌ವಾಶ್ ಮಾಡಿದೆ.
ಇದರೊಂದಿಗೆ ಬೆನ್ ಸ್ಟೋಕ್ಸ್ ತಮ್ಮ ನಾಯಕತ್ವದ ಮೊದಲ ಟೆಸ್ಟ್ ಸರಣಿಯಲ್ಲೇ ಕ್ಲೀನ್ ಸ್ವೀಪ್ ಫಲಿತಾಂಶ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಜತೆಗೆ ನ್ಯೂಜಿಲ್ಯಾಂಡ್‌ನವರೇ ಆದ ಕೋಚ್ ಬ್ರೆಂಡನ್ ಮೆಕಲಮ್ ಕೂಡ ಯಶಸ್ವಿ ಆರಂಭ ಪಡೆದರು.
ಗೆಲುವಿಗೆ 296 ರನ್ ಮಾಡಬೇಕಿದ್ದ ಇಂಗ್ಲೆಂಡ್, ಅಂತಿಮ ದಿನವಾದ ಸೋಮವಾರ 3 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಮೊದಲೆರಡು ಟೆಸ್ಟ್‌ಗಳನ್ನು ಇಂಗ್ಲೆಂಡ್ 5 ವಿಕೆಟ್‌ಗಳ ಅಂತರದಿಂದ ಜಯಿಸಿತ್ತು.
ಚೇಸಿಂಗ್ ವೇಳೆ ಓಲೀ ಪೋಪ್ 82, ಜೋ ರೂಟ್ ಔಟಾಗದೆ 86, ಜಾನಿ ಬೇರ್‌ಸ್ಟೊ ಔಟಾಗದೆ 71 ರನ್ ಬಾರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 55ಕ್ಕೆ ಇಂಗ್ಲೆಂಡಿನ 6 ವಿಕೆಟ್ ಉಡಾಯಿಸಿದಾಗ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಅವಕಾಶ ನ್ಯೂಜಿಲ್ಯಾಂಡ್ ಮುಂದಿತ್ತು. ಆದರೆ ಜಾನಿ ಬೇರ್‌ಸ್ಟೊ 162, ಜೇಮಿ ಓವರ್ಟನ್ 97 ರನ್ ಬಾರಿಸಿ ಇಂಗ್ಲೆಂಡನ್ನು ಮೇಲೆತ್ತಿದರು. ಎರಡೂ ಇನ್ನಿಂಗ್ಸ್ ಗಳಲ್ಲಿ 5 ವಿಕೆಟ್ ಉಡಾಯಿಸಿದ ಜಾಕ್ ಲೀಚ್ ಪಂದ್ಯಶ್ರೇಷ್ಠ, ಮಾಜಿ ನಾಯಕ ಜೋ ರೂಟ್ ಸರಣಿಶ್ರೇಷ್ಠರೆನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-329 ಮತ್ತು 326. ಇಂಗ್ಲೆಂಡ್-360 ಮತ್ತು 3 ವಿಕೆಟಿಗೆ 296 (ರೂಟ್ ಔಟಾಗದೆ 86, ಪೋಪ್ 82, ಬೇರ್‌ಸ್ಟೊ ಔಟಾಗದೆ 71). ಪಂದ್ಯಶ್ರೇಷ್ಠ: ಜಾಕ್ ಲೀಚ್. ಸರಣಿಶ್ರೇಷ್ಠ: ಜೋ ರೂಟ್.