Advertisement

ಸಾವಿರ ಟೆಸ್ಟ್‌  ಗಡಿಯಲ್ಲಿ ಇಂಗ್ಲೆಂಡ್‌

06:00 AM Jul 26, 2018 | |

ಲಂಡನ್‌: ಇಂಗ್ಲೆಂಡನ್ನು ಕ್ರಿಕೆಟ್‌ ಜನಕರ ನಾಡೆಂದೇ ಬಣ್ಣಿಸಲಾಗುತ್ತದೆ. ಶತಮಾನಗಳ ಹಿಂದೆ ಇಲ್ಲಿ ಜನಿಸಿದ ಕ್ರಿಕೆಟ್‌ ಪಂದ್ಯವಿಂದು ಹಲವು ಮಾದರಿಗಳೊಂದಿಗೆ ವಿಶ್ವ ಮಟ್ಟದಲ್ಲಿ ವಿಸ್ತಾರಗೊಳ್ಳುತ್ತಲೇ ಇದೆ. ಹೆಜ್ಜೆ ಹೆಜ್ಜೆಗೆ ಹೊಸ ಹೊಸ ದಾಖಲೆ, ಇತಿಹಾಸ ನಿರ್ಮಾಣವಾಗುವುದು ಕ್ರಿಕೆಟಿನ ವೈಶಿಷ್ಟ. ಈ ನಿಟ್ಟಿನಲ್ಲಿ ಆ. ಒಂದರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ವಿಶೇಷ ಸ್ಥಾನವಿದೆ. ಇದು ಇಂಗ್ಲೆಂಡ್‌ ಆಡಲಿರುವ ಒಂದು ಸಾವಿರದ ಟೆಸ್ಟ್‌ ಪಂದ್ಯ! ಕ್ರಿಕೆಟ್‌ ಜಗತ್ತಿನಲ್ಲಿ ಈ ಸಾಧನೆ ಮಾಡುತ್ತಿರುವ ಮೊದಲ ತಂಡವೆಂಬುದು ಇಂಗ್ಲೆಂಡ್‌ ಪಾಲಿನ ಹೆಗ್ಗಳಿಕೆ.

Advertisement

1877ರಲ್ಲಿ ನಡೆದಿತ್ತು ಮೊದಲ ಟೆಸ್ಟ್‌
1877ರ ಮಾರ್ಚ್‌ 15ರಂದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ತಂಡಗಳು ವಿಶ್ವದ ಪ್ರಪ್ರಥಮ ಟೆಸ್ಟ್‌ ಪಂದ್ಯಕ್ಕೆ ಸಾಕ್ಷಿಯಾಗಿದ್ದವು. ಮೆಲ್ಬರ್ನ್ನಲ್ಲಿ ನಡೆದ ಈ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯ 45 ರನ್ನುಗಳಿಂದ ಗೆದ್ದಿತು. ಇಲ್ಲೇ ನಡೆದ ಸರಣಿಯ 2ನೇ ಹಾಗೂ ಅಂತಿಮ ಪಂದ್ಯವನ್ನು ಇಂಗ್ಲೆಂಡ್‌ 4 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಸಮಬಲಗೊಳಿಸಿತು. 

141 ವರ್ಷಗಳ ಈ ಸುದೀರ್ಘ‌ ಟೆಸ್ಟ್‌ ಇತಿಹಾಸಲ್ಲಿ ಇಂಗ್ಲೆಂಡ್‌ “ಸಾವಿರ ಪಂದ್ಯಗಳ ಸರದಾರ’ನಾಗುತ್ತಿರುವುದು ಕ್ರಿಕೆಟ್‌ ಜಗತ್ತಿನ ಪಾಲಿಗೊಂದು ಸಂಭ್ರಮದ ಕ್ಷಣ. ಈವರೆಗೆ 999 ಟೆಸ್ಟ್‌ಗಳನ್ನಾಡಿರುವ ಇಂಗ್ಲೆಂಡ್‌ 357 ಪಂದ್ಯಗಳನ್ನು ಗೆದ್ದಿದೆ, 297ರಲ್ಲಿ ಸೋಲನುಭವಿಸಿದೆ, 345 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಗೆಲುವಿನ ಲೆಕ್ಕಾಚಾರದಲ್ಲಿ ಇಂಗ್ಲೆಂಡಿಗೆ 2ನೇ ಸ್ಥಾನ. ಆದರೆ ಸೋಲು ಮತ್ತು ಡ್ರಾ ಸಾಧನೆಯಲ್ಲಿ ಇಂಗ್ಲೆಂಡೇ ಮುಂದಿದೆ. ಇಂಗ್ಲೆಂಡ್‌ ಮುನ್ನೂರಕ್ಕೂ ಹೆಚ್ಚು ಪಂದ್ಯಗಳನ್ನು ಡ್ರಾ ಮಾಡಿಕೊಂಡ ಏಕೈಕ ತಂಡ. 

ಹಿಂದೆ ಬಿದ್ದ  ಆಸ್ಟ್ರೇಲಿಯ
ಇಂಗ್ಲೆಂಡಿನೊಂದಿಗೆ ಟೆಸ್ಟ್‌ ಆರಂಭಿ ಸಿದ ಆಸ್ಟ್ರೇಲಿಯ ಈ ಓಟದಲ್ಲಿ ಬಹಳ ಹಿಂದಿದೆ. ಕಾಂಗರೂ ಪಡೆ ಆಡಿರುವುದು 812 ಟೆಸ್ಟ್‌ ಮಾತ್ರ. ಆದರೆ ಗೆಲುವಿನ ಸಾಧನೆಯಲ್ಲಿ ಆಸ್ಟ್ರೇಲಿಯವೇ ಟಾಪರ್‌ (383). 2 ಟೈ ಪಂದ್ಯಗಳಿಗೆ ಸಾಕ್ಷಿಯಾದ ಏಕೈಕ ರಾಷ್ಟ್ರವೂ ಹೌದು.
ಇಂಗ್ಲೆಂಡ್‌, ಆಸ್ಟ್ರೇಲಿಯವನ್ನು ಹೊರತುಪಡಿಸಿದರೆ ವೆಸ್ಟ್‌ ಇಂಡೀಸ್‌ ಮತ್ತು ಭಾರತ 500 ಟೆಸ್ಟ್‌ಗಳ ಗಡಿ ದಾಟಿರುವ ತಂಡಗಳಾಗಿವೆ.

ಮೊದಲ ಎಸೆತದ ಕ್ಷಣ…
ಇಂಗ್ಲೆಂಡಿನ ಅಲ್‌ಫ್ರೆಡ್‌ ಶಾ ಟೆಸ್ಟ್‌ ಪಂದ್ಯದ  ಪ್ರಥಮ ಎಸೆತವನ್ನು ಆಸ್ಟ್ರೇಲಿಯದ ಚಾರ್ಲ್ಸ್‌ ಬ್ಯಾನರ್‌ಮನ್‌ ಅವರಿಗೆ ಎಸೆದರು. 2ನೇ ಎಸೆತದಲ್ಲಿ ಮೊದಲ ರನ್‌ ಬಂತು. 4ನೇ ಓವರಿನಲ್ಲಿ ಮೊದಲ ವಿಕೆಟ್‌ ಬಿತ್ತು. ನಾಟ್‌ ಥಾಮ್ಸನ್‌ ಅವರನ್ನು ಅಲೆನ್‌ ಹಿಲ್‌ ಬೌಲ್ಡ್‌ ಮಾಡಿದ್ದರು. ಎಡ್ವರ್ಡ್‌ ಗ್ರೆಗರಿ ಮೊದಲ ಸೊನ್ನೆ  ಸುತ್ತಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next