ಕನ್ನಡದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಅಖೀಲ ಭಾರತ ತಾಂತ್ರಿಕ ಪರಿಷತ್ ಅವಕಾಶ ನೀಡಿದೆ. ಇದರಿಂದ ಕರ್ನಾಟಕದ ಗ್ರಾಮೀಣ ಭಾಗದ ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಕನ್ನಡದಲ್ಲಿ ಬೋಧಿಸಲು ಬೇಕಾದ ಪಠ್ಯಕ್ರಮವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಯಾರಿಸುತ್ತಿದೆ.
ಕನ್ನಡದಲ್ಲಿ ತಾಂತ್ರಿಕ ಕೋರ್ಸ್ ನೀಡುವ ನಿಟ್ಟಿನಲ್ಲಿ ವಿಟಿಯು ವಿಶೇಷ ಕಾಳಜಿ ವಹಿಸಿ, ತಾಂತ್ರಿಕ ತಜ್ಞರ ಸಮಿತಿ ರಚಿಸಿ, ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿದೆ. ತಾಂತ್ರಿಕ ಕೋರ್ಸ್‌ಗಳನ್ನು ಕನ್ನಡದಲ್ಲೂ ಪಡೆಯಲು ಅವಕಾಶ ನೀಡಬೇಕು ಎಂಬ ಕೂಗು, ಹೋರಾಟ ದಶಕಗಳಿಂದಲೂ ನಡೆದುಕೊಂಡು ಬಂದಿತ್ತು. ಈಗ ತಾಂತ್ರಿಕ ಪರಿಷತ್ ಕನ್ನಡದಲ್ಲೂ ಎಂಜಿನಿಯರಿಂಗ್ ಕೋರ್ಸ್ ನಡೆಸಲು ಅವಕಾಶ ನೀಡಿದ್ದು, ನಿಜವಾದ ಸವಾಲು ಈಗ ಉದ್ಭವಿಸಿದೆ. ತಾಂತ್ರಿಕ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ನೀಡಲಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಆಂಗ್ಲ ಭಾಷೆಯಲ್ಲಿ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡಿ ದಷ್ಟೇ ಉತ್ಕೃಷ್ಟತೆ ಹಾಗೂ ಪರಿಪೂರ್ಣತೆ ಹಾಗೂ ಗುಣಮಟ್ಟ ಕನ್ನಡ ದಲ್ಲೂ ಪದವಿ ಪಡೆದ ವಿದ್ಯಾರ್ಥಿಗಳಿಗೂ ಸಿಗಬೇಕು. ಕನ್ನ ಡ ಭಾಷೆ ಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು, ಆಂಗ್ಲ ಮಾಧ್ಯಮದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳೊಂದಿಗೆ ಸರಿಸಮವಾದ ಸ್ಪರ್ಧೆ ಮಾಡುವಂತೆ ಮಾಡಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಸರಕಾರವೂ ಕೈಗಾರಿಕೆ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಕನ್ನಡ ಪಠ್ಯಕ್ರಮ ಸಿದ್ಧವಾಗುವ ಸಂದರ್ಭಗಳಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶವೂ ದೊರೆಯುವಂತೆ ಮಾಡಬೇಕು.
ಹಾಗೆಯೇ ಎಂಜಿನಿಯರಿಂಗ್ ಕನ್ನಡ ಮಾಧ್ಯಮ ಬೋಧನೆ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸೀಮಿತವಾಗದಂತೆಯೂ ನೋಡಿಕೊಳ್ಳಬೇಕು. ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕೋರ್ಸ್ ಪಡೆಯುವ ಆಯ್ಕೆಯನ್ನು ವಿದ್ಯಾರ್ಥಿ ಗಳಿಗೆ ಕಲ್ಪಿಸುವ ಜತೆಗೆ ಸರಕಾರಿ ಕೋಟಾದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಭರ್ತಿ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದಾದರೂ ರೀತಿಯಲ್ಲಿ ಅನುಕೂಲ ಮಾಡಿಕೊಡಬಹುದೇ ಎಂಬುದರ ಬಗ್ಗೆಯೂ ಸರಕಾರ ಈಗಿಂದಲೇ ಗಂಭೀರವಾಗಿ ಯೋಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
ಈಗ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಜವಾ ಬ್ದಾರಿಯೂ ಹೆಚ್ಚಿದೆ. ಕನ್ನಡ ಮಾಧ್ಯಮದ ತಾಂತ್ರಿಕ ಶಿಕ್ಷಣದ ಬೋಧನೆಯು ಸ್ವಾಯತ್ತ, ಸ್ವತಂತ್ರ ಹಾಗೂ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ನಡೆಯುವಂತೆ ಮಾಡಬೇಕು. ಆಧುನಿಕ ಶಿಕ್ಷಣ ಸರಿಹೊಂದುವಂತೆ ಕನ್ನಡ ಮಾಧ್ಯಮದ ಪಠ್ಯಕ್ರಮವನ್ನು ಆಗಿಂದಾಗೆ ಪರಿಷ್ಕರಿಸುವುದು, ಉನ್ನತೀಕರಿಸುವುದನ್ನು ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳಿಗೆ ಉನ್ನತ ಸಂಶೋಧನೆಯೂ ಕನ್ನಡದಲ್ಲೇ ನಡೆಸಲು ಅವಕಾಶ ಮಾಡಿಕೊಡಬೇಕು.