Advertisement

ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಕೊಳ್ಳಿ

02:52 PM Nov 23, 2018 | Team Udayavani |

ಕೊಪ್ಪ: 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಅಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರೀ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಭಾರ್ಗವಿ ನೃತ್ಯ ವೈಭವ ಕಲಾಸಕ್ತರ ಮನರಂಜಿಸಿತು.

Advertisement

ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಾಡಿನ ಹೆಮ್ಮೆಯ ಕಲಾವಿದರು ಮೈನವಿರೇಳಿಸುವ ಅಮೋಘ ಪ್ರದರ್ಶನ ನೀಡಿದರು. ವಿಶೇಷವಾಗಿ ಜರ್ಮನ್‌ ರಿಂಗ್‌ ಡ್ಯಾನ್ಸ್‌, ಆಂಟಿ ಗ್ರಾವಿಟಿ ನೃತ್ಯ, ಜಿಮ್ನಾಸ್ಟಿಕ್‌ ಡ್ಯಾನ್ಸ್‌, ಕುಂಭ ನೃತ್ಯ ಕಾರ್ಯಕ್ರಮದಲ್ಲಿ ಸೇರಿದ್ದ 10,000ಕ್ಕೂ ಹೆಚ್ಚು ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.

ನವದುರ್ಗೆಯರ ನೃತ್ಯ, ಸ್ಕೇಟಿಂಗ್‌ ಡ್ಯಾನ್ಸ್‌, ಯಕ್ಷಗಾನ, ಜಾನಪದ ನೃತ್ಯ ಒಳಗೊಂಡಂತೆ ಹತ್ತಾರು ದೇಶಿಯ ಪ್ರಕಾರದ ನೃತ್ಯಗಳ ಅಪೂರ್ವ ಸಂಗಮಗಳು ವಿಶಾಲವಾದ ಭವ್ಯ ವೇದಿಕೆಯಲ್ಲಿ ಆರ್‌.ಜೆ.ಪ್ರಸನ್ನರವರ ನಿರೂಪಣೆಯಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಇದರ ಜೊತೆಗೆ ಕಲರ್ ಕನ್ನಡ ಟಿವಿಯ ಸರಿಗಮಪ ಗಾಯಕಿ ಅಖೀಲ ಪಜಿಮಣ್ಣು ಅವರ ಗಾಯನ ಪ್ರೇಕ್ಷಕರನ್ನು ಮುದಗೊಳಿಸಿತು.
 
ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ಸಂಘದ ಅಧ್ಯಕ್ಷ ಯು.ಪಿ.ವಿಜಯಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಮಾಜಿ ಶಾಸಕ ಡಿ.ಎನ್‌. ಜೀವರಾಜ್‌ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಟೋಚಾಲಕರು ತಮ್ಮ ದಿನನಿತ್ಯದ ಶ್ರಮದ ದುಡಿಮೆಯಲ್ಲಿ ಕುಟುಂಬ ನಿರ್ವಹಣೆಯ ಜತೆಗೆ ಸಮಾಜಮುಖೀ ಕಾರ್ಯಚಟುವಟಿಕೆಗಳಲ್ಲೂ ತೊಡಿಗಿಸಿಕೊಂಡಿದ್ದಾರೆ. ಪ್ರಾಮಾಣಿಕತೆ, ದಕ್ಷತೆಗೆ ಶೃಂಗೇರಿ ಕ್ಷೇತ್ರದ ಅಟೋಚಾಲಕರು ಮಾದರಿಯಾಗಿದ್ದಾರೆ. ನಾಡು ನುಡಿಯ ವಿಚಾರದಲ್ಲಿ ವಿಶೇಷ ಗೌರವ ಇಟ್ಟುಕೊಂಡಿರುವ ಇಲ್ಲಿನ ಅಟೋಚಾಲಕರ ಸಂಘ ಪ್ರತಿವರ್ಷ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದೆ. ಇಂದಿನ ಕಾರ್ಯಕ್ರಮದಲ್ಲಿ ಸೈನಿಕರನ್ನು ಸನ್ಮಾನಿಸಿದ್ದು ಹೆಚ್ಚು ಸಂತೋಷ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಕ ಎಲ್‌.ಎಂ. ಪ್ರಕಾಶ್‌, ಭಾರತೀಯ ಸೇನೆಯ ಸೈನಿಕ ಆದರ್ಶ, ಹಿರಿಯ ಅಟೋಚಾಲಕ ಬಾಬಣ್ಣ, ಉದ್ಯಮಿ ನಾಸೀರ್‌ ಇತರರನ್ನು ಸನ್ಮಾನಿಸಲಾಯಿತು.

Advertisement

ಜಿಪಂ ಸದಸ್ಯರಾದ ಎಸ್‌.ಎನ್‌. ರಾಮಸ್ವಾಮಿ, ಪಪಂ ಅಧ್ಯಕ್ಷೆ ಡಿ.ಪಿ. ಅನುಸೂಯಾ ಕೃಷ್ಣಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ಕೆ.ಎನ್‌. ಪ್ರಸನ್ನ ಶೆಟ್ಟಿ, ಕಳಾಸಪುರ ಎಸ್ಟೇಟ್‌ ಮಾಲೀಕ ಅನಿಲ್‌ ಕುಲಾಸೋ, ಗೋಲ್ಡನ್‌ ಲೇಔಟ್‌ ಮಾಲೀಕ ಎಸ್‌.ಬಿ. ಸತೀಶ್ಚಂದ್ರ ಶೆಟ್ಟಿ, ತೀರ್ಥಹಳ್ಳಿ ರೋಟರಿ ಕ್ಲಬ್‌ ಅಧ್ಯಕ್ಷ ಶರತ್‌ ಗುಬ್ಬುಗದ್ದೆ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ದಿನೇಶ್‌, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್‌ ಜೈನ್‌, ವೈದ್ಯ ಡಾ| ಅಮರಶೇಖರ್‌, ಅಟೋಚಾಲಕರು ಮತ್ತು ಮಾಲೀಕರ ಸಂಘದ ಕ್ಷೇತ್ರಾಧ್ಯಕ್ಷ ಸದಾಶಿವ, ಗೌರವಾಧ್ಯಕ್ಷ ಎಚ್‌.ಆರ್‌. ಜಗದೀಶ್‌, ತಾಲೂಕು ಗೌರವಾಧ್ಯಕ್ಷ ಎಂ. ನಾರಾಯಣಸ್ವಾಮಿ, ಕ್ಷೇತ್ರದ ವಿವಿಧೆಡೆಯ ಅಟೋಚಾಲಕರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next