Advertisement
ಇಲ್ಲಿ ಕುಂದಾಪುರ – ಭಟ್ಕಳ ನಡುವೆ ಸಂಚರಿಸುವ ಬಸ್‌ಗಳನ್ನು ನಿಲ್ಲಿಸಬೇಕು ಎನ್ನುವ ಕೆಎಸ್‌ಆರ್‌ಟಿಸಿ ಆದೇಶವಿದ್ದರೂ, ಕೆಲವು ನಿರ್ವಾಹಕರು, ಚಾಲಕರು ಬಸ್‌ಗಳನ್ನು ನಿಲ್ಲಿಸದೇ ಉದ್ಧಟತನದ ವರ್ತನೆ ತೋರುತ್ತಿರುವುದಾಗಿ ಈ ಭಾಗದ ಪ್ರಯಾಣಿಕರು ಆರೋಪಿಸಿದ್ದಾರೆ. ಈ ಮಾರ್ಗದಲ್ಲಿ ಬಸ್‌ಗಳಲ್ಲಿ ಇಲ್ಲಿನ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಈಗ ವಾಗ್ವಾದ ಖಾಯಂ ಅನ್ನುವಂತಾಗಿದೆ. ಮಾರಸ್ವಾಮಿ ದೇವಾಲಯಕ್ಕೆ ಬರುವವರು, ಅಲ್ಲಿಂದ ಒಳಭಾಗಕ್ಕೆ ಹೋಗುವವರಿಗೆ ಇದರಿಂದ ತೊಂದರೆಯಾಗುತ್ತಿದೆ.
ಕುಂದಾಪುರ ಅಥವಾ ಬೈಂದೂರು ಭಾಗದಿಂದ ಈ ಬಸ್‌ಗಳಲ್ಲಿ ಸಂಚರಿಸುವ ಮರವಂತೆಯ ಮಾರಸ್ವಾಮಿ ಭಾಗದ ಪ್ರಯಾಣಿಕರು ನಿತ್ಯ ನಿರ್ವಾಹಕರ ಬಳಿ ನಿಲುಗಡೆಗಾಗಿ ದುಂಬಾಲು ಬೀಳುವಂತಹ ಪರಿಸ್ಥಿತಿಯಿದ್ದು, ಅದಾಗಿಯೂ ಬಹುತೇಕರು ನಿಲ್ಲಿಸದೇ, ಬೇರೆ ಕಡೆಗಳಲ್ಲಿ ಇಳಿದು ಕಿಲೋ ಮೀಟರ್‌ಗಟ್ಟಲೆ ದೂರದಿಂದ ವಾಪಾಸು ನಡೆದುಕೊಂಡು ಬರಬೇಕಾದ ಸ್ಥಿತಿಯಿದೆ. ಇದರಿಂದ ಮುಖ್ಯವಾಗಿ ಮರವಂತೆಯ ಮಾರಸ್ವಾಮಿ ದೇವಸ್ಥಾನಕ್ಕೆ ಹೋಗುವವರಿಗೆ, ಇನ್ನು ನಾಡ, ಪಡುಕೋಣೆ, ಹಡವು, ಆಲೂರು ಭಾಗದ ಜನರಿಗೆ ಕುಂದಾಪುರ ಅಥವಾ ಬೈಂದೂರಿಗೆ ಹೋಗಲು, ವಾಪಾಸು ಬರಲು ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಶಕ್ತಿ ಯೋಜನೆಯಡಿ ರಾಜ್ಯ ಸರಕಾರದಿಂದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶವಿದ್ದರೂ, ಈ ಭಾಗದ ನೂರಾರು ಜನ ಮಹಿಳೆಯರಿಗೆ ಮಾತ್ರ ಇದರ ಪ್ರಯೋಜನ ಸಿಗದಂತಾಗಿದೆ. ಕಡ್ಡಾಯ ನಿಲುಗಡೆಗೆ ಸೂಚನೆ
ಮಾರಸ್ವಾಮಿ ಬಳಿ ನಿಲುಗಡೆ ಕೊಡದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಈ ವಿಷಯ ತಿಳಿದ ಕೂಡಲೇ ನಾನು ಎಲ್ಲರಿಗೂ ಕಡ್ಡಾಯವಾಗಿ ಅಲ್ಲಿ ಬಸ್ ನಿಲ್ಲಿಸಲು ಸೂಚನೆ ನೀಡಿದ್ದೇನೆ. ಇನ್ನೂ ಈ ಬಗ್ಗೆ ಒಂದಿನ ಅಲ್ಲಿಗೆ ನಮ್ಮ ಸಿಬಂದಿ ನಿಯೋಜಿಸಿ, ನಿಗಾ ವಹಿಸಲಾಗುವುದು. ಅಲ್ಲಿ ಹೆಚ್ಚಿನ ಜಾಗ ಇಲ್ಲದಿರುವುದರಿಂದ ಬಸ್ ನಿಲ್ಲಿಸಿದರೆ, ಹಿಂದಿನಿಂದ ಬೇರೆ ವಾಹನ ಬಂದು ಢಿಕ್ಕಿಯಾದ ನಿದರ್ಶನವೂ ಇದೆ. ಅಲ್ಲಿ ಸ್ವಲ್ಪ ಜಾಗ ವಿಸ್ತರಣೆ ಮಾಡಿದರೆ ಅನುಕೂಲವಾಗಲಿದೆ.
– ಉದಯ ಕುಮಾರ್ ಶೆಟ್ಟಿ, ಕುಂದಾಪುರ ಕೆಎಸ್‌ಆರ್‌ಟಿಸಿ, ಡಿಪೋ ಮ್ಯಾನೇಜರ್
Related Articles
ಹಲವು ಸಮಯದ ಹೋರಾಟದ ಫಲವಾಗಿ ಹಿಂದೆ ಇಲ್ಲಿ ಕುಂದಾಪುರ- ಭಟ್ಕಳ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ಆದೇಶ ಹೊರಡಿಸಲಾಗಿತ್ತು. ಈಗ ಮತ್ತೆ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ನಿರ್ವಾಹಕರು ಒಪ್ಪುತ್ತಿಲ್ಲ. ಕೇಳಿದರೆ ನಮ್ಮೊಂದಿಗೆ ರಗಳೆ ಮಾಡುತ್ತಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಹೀಗೆ ಮುಂದುವರಿದರೆ ಮತ್ತೆ ಹೋರಾಟ ಮಾಡಲಾಗುವುದು.
– ಶೀಲಾವತಿ ಪಡುಕೋಣೆ, ಜಿಲ್ಲಾ ಪ್ರ. ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ
Advertisement
ಹೋರಾಟದ ಫಲವಾಗಿ ಸ್ಟಾಪ್ ಸಿಕ್ಕಿತ್ತುಬಹಳಷ್ಟು ವರ್ಷಗಳ ಹಿಂದಿನಿಂದಲೂ ಮರವಂತೆಯ ಮಾರಸ್ವಾಮಿ ಬಸ್ ನಿಲ್ದಾಣದಲ್ಲಿ ಕೆಲವೇ ಕೆಲವು ಸ್ಥಳೀಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಾತ್ರ ನಿಲುಗಡೆ ನೀಡುತ್ತಿದ್ದು, ಹೆಚ್ಚಿನವು ನಿಲ್ಲುತ್ತಲೇ ಇರಲಿಲ್ಲ. ಶಕ್ತಿ ಯೋಜನೆ ಜಾರಿಯಾದ ನಂತರ ಇದರ ಪ್ರಯೋಜನ ಈ ಭಾಗದ ಮಹಿಳೆಯರಿಗೂ ಸಿಗಲಿ ಅನ್ನುವ ಕಾರಣಕ್ಕೆ ಜನವಾದಿ ಮಹಿಳಾ ಸಂಘಟನೆಯೂ ನಿರಂತರ ಹೋರಾಟವನ್ನು ಸಂಘಟಿಸಿತು. ಇದಕ್ಕೆ ಡಿವೈಎಫ್‌ಐ ಸಂಘಟನೆಯು ಸಾಥ್ ನೀಡಿತು. ಈ ಹೋರಾಟದ ಫಲವಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕುಂದಾಪುರ – ಭಟ್ಕಳ ಮಾರ್ಗದ ಎಲ್ಲ ಸಾಮಾನ್ಯ ಸಾರಿಗೆ ಬಸ್‌ಗಳನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ, ಕೆಲವು ದಿನಗಳಿಂದ ಕುಂದಾಪುರ – ಭಟ್ಕಳ ನಡುವಿನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಇಲ್ಲಿ ನಿಲ್ಲಿಸದೇ ತೆರಳುತ್ತಿದ್ದಾರೆ. ಬಸ್ ನಿಲ್ಲಿಸುವುದಿಲ್ಲ, ಏನ್ಮಾಡ್ತೀರಿ?
ಕುಂದಾಪುರದಲ್ಲಿ ನಾನು ಕುಂದಾಪುರ- ಭಟ್ಕಳ ಬಸ್ ಹತ್ತಿ, ಇಲ್ಲಿ ನಿಲುಗಡೆ ಕೇಳಿದರೆ ಕೊಡಲು ಆಗುವುದಿಲ್ಲ ಅಂತ ದುರ್ವರ್ತನೆ ತೋರುತ್ತಾರೆ. ಅವರಿಗೆ ಇಲ್ಲಿ ನಿಲುಗಡೆಗೆ ಆದೇಶವಿದೆ ಅಂದರೂ ನೀವು ಯಾರ ಬಳಿ ಬೇಕಾದರೂ ಹೇಳಿಕೊಳ್ಳಿ. ನಾವು ಇಲ್ಲಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ ಎನ್ನುವುದಾಗಿ ಉದ್ಧಟತನದ ಮಾತುಗಳನ್ನು ಪ್ರಯಾಣಿಕರ ಬಳಿ ಮಾತನಾಡುತ್ತಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಇರುವುದು ಜನರ ಪ್ರಯೋಜನಕ್ಕಾಗಿಯೋ? ಅಥವಾ ನಿರ್ವಾಹಕರ ಅನುಕೂಲಕ್ಕಾಗಿಯೋ? ಅನ್ನುವುದಾಗಿ ಪಡುಕೋಣೆಯ ನಿವಾಸಿ ಸುಬ್ರಹ್ಮಣ್ಯ ಆಚಾರ್ ಪ್ರಶ್ನಿಸಿದ್ದಾರೆ. -ಪ್ರಶಾಂತ್ ಪಾದೆ