ಕಲಘಟಗಿ: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಕರೆ ನೀಡಿದರು.
ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಗಳ ಸಂಯಕ್ತ ಆಶ್ರಯದಲ್ಲಿ ತಾಲೂಕಿನ ದೇವಿಕೊಪ್ಪ ಗ್ರಾಮದ ಜನತಾ ಪ್ಲಾಟ್‌ನ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರ ಬಂದು ತಮ್ಮ ಕ್ರೀಡಾ ಸಾಧನೆಗೆ ಸಮಯ ಮೀಸಲಿಡಬೇಕು. ಮೊಬೈಲ್‌ನ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಿದ್ದು, ಇಂದು ಮೊಬೈಲ್ ಎಲ್ಲರ ಸಮಯ ಹಾಳು ಮಾಡುತ್ತಿದೆ. ಇದರಿಂದ ಮಾನಸಿಕ ಹಾಗೂ ದೈಹಿಕ ಬಳಲಿಕೆ ಹೆಚ್ಚಾಗುತ್ತಲಿದೆ. ಆದರೆ ಕ್ರೀಡೆ ಎಂಬುದು ದೈಹಿಕವಾಗಿ ಆರೋಗ್ಯವಾಗಿರಲು ಪೂರಕವಾಗಿದೆ. ಕ್ರೀಡಾಭಿಮಾನದಿಂದ ಎಲ್ಲರೂ ಸ್ಪರ್ಧೆಯಲ್ಲಿ ತೊಡಗಬೇಕು. ಗೆಲುವಿನಿಂದ ಬೀಗದೇ ಸೋಲಿನಿಂದ ಕುಗ್ಗದೇ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಮಾನಸಿಕ ಶಾಂತಿಗಾಗಿ ಪ್ರತಿಯೊಬ್ಬರೂ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಗ್ರಾಪಂ ಸದಸ್ಯ ಹನುಮಂತಪ್ಪ ಭೋವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅವರ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿಯ ಸಾಧಕರೇ ಆದರ್ಶಪ್ರಾಯರಾಗಿರಲಿ. ವಿದ್ಯಾರ್ಥಿಗಳು ತಮ್ಮ ಆರೋಗ್ಯದತ್ತ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯ. ಶಿಕ್ಷಕ ವೃಂದ ಬಾಲ್ಯದಲ್ಲಿಯೇ ಕ್ರೀಡಾಭಿಮಾನ ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷ ಸಾತಪ್ಪ ಸೂಳಿಕಟ್ಟಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಬಾಗುಬಾಯಿ ಕರಾತ್, ಸದಸ್ಯರು, ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್, ಎಸ್ ಡಿಎಮ್‌ಸಿ ಅಧ್ಯಕ್ಷ ಯಲ್ಲಪ್ಪ ಬೇಗೂರ, ಮಂಜುನಾಥ ಕೊರವರ, ಬಸವ್ವ ದೊಡ್ಡಮನಿ, ಮುಖ್ಯಾಧ್ಯಾಪಕ ಡಿ.ಡಿ.ಅಲಿಬಾಯಿ, ಲಕ್ಷ್ಮಣ ಭಜಂತ್ರಿ ಸೇರಿದಂತೆ ವಿವಿಧ ಶಾಲೆಗಳ ಎಸ್ ಡಿಎಮ್‌ಸಿಯವರು, ಮುಖ್ಯಾಧ್ಯಾಪಕರು, ದೈಹಿಕ ಹಾಗೂ ಇತರೆ ಶಿಕ್ಷಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಆರ್‌ಪಿ ಶರೀಫ್ ಹರಿಜನ ಪ್ರತಿಜ್ಞಾವಿಧಿ ಬೋ ಧಿಸಿದರು. ಜಗದೀಶ ವಿರಕ್ತಿಮಠ ನಿರೂಪಿಸಿದರು. ರೇಣುಕಾ ಹರನಾಳ ವಂದಿಸಿದರು.