Advertisement

ಏಕದಿನ: ವನಿತೆಯರಿಗೆ ಸರಣಿ ಗೆಲುವಿನ ತವಕ

09:07 PM Sep 20, 2022 | Team Udayavani |

ಕ್ಯಾಂಟರ್‌ಬರಿ: ಇಂಗ್ಲೆಂಡ್‌ ನೆಲದಲ್ಲಿ 1999ರ ಬಳಿಕ ಏಕದಿನ ಸರಣಿಯನ್ನು ಗೆಲ್ಲುವ ಉಜ್ವಲ ಅವಕಾಶವೊಂದು ಭಾರತದ ವನಿತೆಯರಿಗೆ ಎದುರಾಗಿದೆ.

Advertisement

ಬುಧವಾರ ಕ್ಯಾಂಟರ್‌ಬರಿಯ  ಸೇಂಟ್‌ ಲಾರೆನ್ಸ್‌ ಗ್ರೌಂಡ್‌ನ‌ಲ್ಲಿ ದ್ವಿತೀಯ ಮುಖಾಮುಖಿ ನಡೆಯಲಿದ್ದು, ಇದನ್ನು ಗೆದ್ದರೆ ಐತಿಹಾಸಿಕ ಸರಣಿ ಹರ್ಮನ್‌ಪ್ರೀತ್‌ ಕೌರ್‌ ಬಳಗದ್ದಾಗಲಿದೆ. 1999ರಲ್ಲಿ ಭಾರತ ಕೊನೆಯ ಸಲ ಇಂಗ್ಲೆಂಡ್‌ ನೆಲದಲ್ಲಿ ಸರಣಿ ಜಯಭೇರಿ ಮೊಳಗಿಸಿತ್ತು. ಅಂಜುಮ್‌ ಚೋಪ್ರಾ ಅವರ ಶತಕ ಹಾಗೂ ಅರ್ಧಶತಕ ಭಾರತದ 2-1 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಗೆಲುವಿನೊಂದಿಗೆ ಆರಂಭ: ಈ ಬಾರಿ ಭಾರತ ತಂಡ ಜಯದೊಂದಿಗೆ ಸರಣಿ ಆರಂಭಿಸಿದೆ. ಹೋವ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ನಮ್ಮ ವನಿತೆಯರು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದರು. ಇದೇ ಲಯದಲ್ಲಿ ಸಾಗಿದರೆ ದ್ವಿತೀಯ ಪಂದ್ಯವನ್ನೂ ವಶಪಡಿಸಿಕೊಳ್ಳಬಹುದು. ಆದರೆ ಈ ಸರಣಿ ಅಂತಿಮ ಪಂದ್ಯದಲ್ಲಿ ಇತ್ಯರ್ಥವಾದರೆ ಕಷ್ಟ. ಏಕೆಂದರೆ, ಭಾರತದ ವನಿತೆಯರು ನಿರ್ಣಾಯಕ ಮುಖಾಮುಖೀಯಲ್ಲಿ ಗೆಲುವಿನ ಮುಖ ಕಾಣುವುದೇ ಅಪರೂಪ!

39 ವರ್ಷದ ಅನುಭವಿ ವೇಗಿ ಜೂಲನ್‌ ಗೋಸ್ವಾಮಿಗೆ ಸ್ಮರಣೀಯ ವಿದಾಯ ಕೋರಲಿಕ್ಕಾದರೂ ಭಾರತ ಈ ಸರಣಿಯನ್ನು ಗೆಲ್ಲಲೇಬೇಕಿದೆ. ಹೋವ್‌ ಪಂದ್ಯದಲ್ಲಿ ಸ್ವತಃ ಜೂಲನ್‌ ಅವರೇ ಮುಂಚೂಣಿಯಲ್ಲಿ ನಿಂತು ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ್ದನ್ನು ಮರೆಯುವಂತಿಲ್ಲ. ಅಲ್ಲಿ ಇವರ ಬೌಲಿಂಗ್‌ ಫಿಗರ್‌ ಇಷ್ಟೊಂದು ಆಕರ್ಷಕವಾಗಿತ್ತು: 10-2-20-1.

ಚೇಸಿಂಗ್‌ ವೇಳೆ ಸ್ಮತಿ ಮಂಧನಾ, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್‌ ಕೌರ್‌ ಇಂಗ್ಲೆಂಡ್‌ ಬೌಲಿಂಗ್‌ ಆಕ್ರಮಣಕ್ಕೆ ಸಡ್ಡು ಹೊಡೆದು ನಿಂತಿದ್ದರು. ಆದರೆ ಶಫಾಲಿ ವರ್ಮ ಕ್ಲಿಕ್‌ ಆಗಿರಲಿಲ್ಲ. ಈ ಡ್ಯಾಶಿಂಗ್‌ ಓಪನರ್‌ ಸಿಡಿದು ನಿಂತರೆ ಭಾರತಕ್ಕೆ ಬಂಪರ್‌ ಖಂಡಿತ.

Advertisement

ತಿರುಗಿ ಬಿದ್ದೀತು ಇಂಗ್ಲೆಂಡ್‌: ಇಂಗ್ಲೆಂಡ್‌ ಅಷ್ಟು ಸುಲಭದಲ್ಲಿ ಶರಣಾಗುವ ತಂಡವಲ್ಲ, ಅದೂ ತವರು ನೆಲದಲ್ಲಿ. ಮೂವರು ಪ್ರಮುಖ ಆಟಗಾರ್ತಿಯರ ಗೈರು ಇಂಗ್ಲೆಂಡ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ. ಮೊದಲ ಪಂದ್ಯದಲ್ಲಿ ಭಾರತ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿದೆ. ಇಂಗ್ಲೆಂಡ್‌ ಅಗ್ರ ಕ್ರಮಾಂಕದಲ್ಲಿ ವೈಫ‌ಲ್ಯ ಕಂಡಿತ್ತು. ಅಲೈಸ್‌ ಕ್ಯಾಪ್ಸಿ, ಸೋಫಿಯಾ ಡಂಕ್ಲಿ, ಡೇನಿಯಲ್‌ ವ್ಯಾಟ್‌, ಕೊನೆಯಲ್ಲಿ ಡೇವಿಡ್‌ಸನ್‌ ರಿಚರ್ಡ್ಸ್‌ ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತ್ತು. ಇವರು ಮತ್ತೆ ಅಪಾಯಕಾರಿಯಾಗಿ ಗೋಚರಿಸುವ ಎಲ್ಲ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next