ಲಂಡನ್: ಕಾಗಿಸೊ ರಬಾಡ ಅವರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಕೇವಲ 165 ರನ್ನಿಗೆ ಆಲೌಟಾಗಿದೆ. ಆಲೀ ಪೋಪ್ ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ಆತಿಥೇಯ ತಂಡ ಸಾಧಾರಣ ಮೊತ್ತ ಪೇರಿಸಲು ಸಾಧ್ಯವಾಗಿದೆ.
ಈ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ಆರಂಭ ಉತ್ತಮವಾಗಿರಲಿಲ್ಲ. ರಬಾಡ ಸೇರಿದಂತೆ ದಕ್ಷಿಣ ಆಫ್ರಿಕಾದ ಬಿಗು ದಾಳಿಗೆ ಕುಸಿದ ಇಂಗ್ಲೆಂಡ್ 55 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಅಲೆಕ್ಸ್ ಲೀಸ್, ಝಾಕ್ ಕ್ರಾಲೆ, ಜೋ ರೂಟ್ ಮತ್ತು ಜಾನಿ ಬೇರ್‌ಸ್ಟೋ ಅಲ್ಪ ಮೊತ್ತಕ್ಕೆ ಔಟಾಗಿದ್ದರು. ಆದರೆ ಆಲೀ ಪೋಪ್ ಅವರ ತಾಳ್ಮೆಯ ಆಟದಿಂದಾಗಿ ತಂಡ ಚೇತರಿಸುವಂತಾಯಿತು.
ಊಟದ ವಿರಾಮದ ಮೊದಲು ಅರ್ಧಶತಕ ಪೂರ್ತಿಗೊಳಿಸಿದ್ದ 24ರ ಹರೆಯದ ಪೋಪ್ ಆಬಳಿಕ ಸ್ವಲ್ಪ ಹೊತ್ತಿನಲ್ಲಿ ಭಾರೀ ಮಳೆಯಿಂದಾಗಿ ಆಟ ಬೇಗನೇ ನಿಲ್ಲಿಸಿದಾಗ ಪೋಪ್ 61 ರನ್ ಗಳಿಸಿ ಆಡುತ್ತಿದ್ದರು. ಆಗ ತಂಡ 6 ವಿಕೆಟಿಗೆ 116 ರನ್ ಗಳಿಸಿತ್ತು.
ಇದೇ ಮೊತ್ತದಿಂದ ದ್ವಿತೀಯ ದಿನ ಆಟ ಆರಂಭವಾಗಿದ್ದು ಇಂಗ್ಲೆಂಡ್ 165 ರನ್ ಗಳಿಸಿ ಆಲೌಟಾಯಿತು. ಪೋಪ್ 73 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. 102 ಎಸೆತ ಎದುರಿಸಿದ ಅವರು 5 ಬೌಂಡರಿ ಬಾರಿಸಿದರು. 20 ರನ್ ಗಳಿಸಿದ ಬೆನ್ ಸ್ಟೋಕ್ಸ್ ತಂಡದ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರಿಬ್ಬರನ್ನು ಬಿಟ್ಟರೆ ಸ್ಟುವರ್ಟ್ ಬ್ರಾಡ್ ಮತ್ತು ಜಾಕ್ ಲೀಚ್ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು.
ಬಿಗು ದಾಳಿ ಸಂಘಟಿಸಿದ್ದ ಕಾಗಿಸೊ ರಬಾಡ 52 ರನ್ನಿಗೆ 5 ವಿಕೆಟ್ ಹಾರಿಸಿದರು. ಆ್ಯನ್ರಿಚ್ ನೋರ್ಜೆ 63ಕ್ಕೆ 3 ಮತ್ತು ಮಾರ್ಕೊ ಜಾನ್ಸೆನ್ 30ಕ್ಕೆ 2 ವಿಕೆಟ್ ಪಡೆದರು.