Advertisement

ಗೋಹತ್ಯೆ ನಿಷೇಧ ಕಾಯ್ದೆ ಗದ್ದಲ

10:35 AM Mar 09, 2019 | |

ಶಿವಮೊಗ್ಗ: ಕಳೆದ ಮಹಾನಗರ ಪಾಲಿಕೆ ಸಭೆಯಲ್ಲಿ ಸಭೆಯಿಂದ ಅರ್ಧಕ್ಕೆ ಹೊರ ನಡೆದಿದ್ದ ಅಧಿಕಾರಿಗಳ ಕ್ರಮವನ್ನು ಎಲ್ಲ ಸದಸ್ಯರು ಖಂಡಿಸಿದರು. ಸುದೀರ್ಘ‌ ತರಾಟೆ ನಂತರ ಆಯುಕ್ತೆ ಚಾರುಲತಾ ಸೋಮಲ್‌ ಪ್ರತಿಕ್ರಿಯಿಸಿ ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಮೇಲೆ ಸಭೆ ಆರಂಭವಾಯಿತು.
 
ಶುಕ್ರವಾರ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಆಯುಕ್ತರ ವಿರುದ್ಧ ಎಲ್ಲ ಸದಸ್ಯರು ಹರಿಹಾಯ್ದರು. ಕಳೆದ ಸಭೆಗೆ ಗೈರಾದ ಅಧಿಕಾರಿಗಳ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯೆ ಸುರೇಖಾ ಮುರುಳೀಧರ್‌ ಮೇಯರ್‌ ಅವರನ್ನು ಪ್ರಶ್ನಿಸಿದರು. ಇದು ಮೇಯರ್‌ಗೆ ಮಾಡಿದ ಅಪಮಾನ. ಅವರು ಸಭೆಯನ್ನು 10 ನಿಮಿಷ ಮುಂದೂಡಿದ ಮೇಲೆ ಯಾರೂ ಸಭೆಗೆ ಬರಲಿಲ್ಲ. ಆಯುಕ್ತರು ಸದಸ್ಯರ ಕ್ಷಮೆ ಕೇಳಬೇಕು ಸದಸ್ಯ ಶಂಕರ್‌ ಗನ್ನಿ ಒತ್ತಾಯಿಸಿದರು. 

Advertisement

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತೆ ಚಾರುಲತಾ ಸೋಮಲ್‌, ಅಧಿಕಾರಿಗಳು ಈ ಹಿಂದೆಯೂ ಸಹಕಾರ ನೀಡಿದ್ದಾರೆ. ಮುಂದೆಯೂ ಸಹಕಾರ ನೀಡಲಿದ್ದಾರೆ ಎಂದರು. ತಕ್ಷಣ ಪ್ರತಿಕ್ರಿಯಿಸಿದ ಸದಸ್ಯ ಶಂಕರ್‌ ಗನ್ನಿ, ಹಾಗಾದರೆ ನೀವು ಸಭೆಯಿಂದ ಎದ್ದು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದರು. ನಂತರ ಸದಸ್ಯರಾದ ಜ್ಞಾನೇಶ್ವರ್‌, ಆರ್‌.ಸಿ. ನಾಯ್ಕ, ಅನಿತಾ ರವಿಶಂಕರ್‌ ಇದಕ್ಕೆ ಧ್ವನಿಗೂಡಿಸಿದರು.
 
 ಒಂದು ಹಂತದಲ್ಲಿ ಸದಸ್ಯ ಯೋಗೀಶ್‌ ಅವರು, ಸಭೆಗೆ ಹಾಜರಾಗದ ಎಲ್ಲಾ ಅಧಿಕಾರಿಗಳ ಒಂದು ದಿನದ ಸಂಬಳ ಕಡಿತಗೊಳಿಸಲು ಪಾಲಿಕೆಯಲ್ಲಿ ನಿರ್ದಾರ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆದ ನಂತರ ಉಪ ಮೇಯರ್‌ ಚನ್ನಬಸಪ್ಪ ಮಾತನಾಡಿ, ಈ ಪ್ರಕರಣದ ಎಲ್ಲರಿಗೂ ಅವಮಾನಕರ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಷಯ ತಿಳಿಸಲಾಗಿದೆ. ಸರ್ಕಾರದಿಂದಲೇ ಕ್ರಮ ಕೈಗೊಳ್ಳುವುದರಿಂದ ವಿಷಯವನ್ನು ಇಲ್ಲಿಗೇ ಬಿಡೋಣ ಎಂದರು.

 ಈ ನಡುವೆ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಮಾತನಾಡಿ, ಪಾಲಿಕೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳ ಸಹಕಾರ ಇರುತ್ತದೆ. ಕಳೆದ ಸಭೆಯಲ್ಲಿ ನಡೆದ ಅಚಾರ್ತುಕ್ಕೆ ವಿಷಾದವಿದೆ ಎಂದಿದ್ದರಿಂದ ವಿಷಯ ಕೈಬಿಡಲಾಯಿತು.
 
 ನಗರದ 13ನೇ ವಾರ್ಡ್‌ನ ಪಾಲಿಕೆ ಸದಸ್ಯ ಪ್ರಭಾಕರ್‌, ಈ ವಿಷಯ ಪ್ರಸ್ತಾಪಿಸಿ ನಗರದ ಲಷ್ಕರ್‌ ಮೊಹಲ್ಲಾ, ಅಲೆಮನ ಕೇರಿ ಭಾಗದಲ್ಲಿನ ಕಸಾಯಿಖಾನೆಗಳಲ್ಲಿ ಅಕ್ರಮವಾಗಿ ಗೋವುಗಳ ಹತ್ಯೆ ಮಾಡಲಾಗುತ್ತಿದೆ. ಈ ಗೋವುಗಳ ರಕ್ತ ಚರಂಡಿಗಳಲ್ಲೇ ಹರಿಯುತ್ತದೆ. ಅಲ್ಲದೆ ಗೋಮಾಂಸದ ಬೇಡವಾದ ಭಾಗಗಳನ್ನು ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಈ ಭಾಗದಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಆಕ್ರೋಶಗೊಂಡ ಉಪ ಮೇಯರ್‌ ಚನ್ನಬಸಪ್ಪ ಅವರು, ಗೋವುಗಳ ಹತ್ಯೆ ಮಾಡುತ್ತಿರುವುದೇ ಕಾನೂನು ಬಾಹಿರ. ಅದರಲ್ಲೂ ಅಕ್ರಮವಾಗಿ ಕಸಾಯಿಖಾನೆಗಳಲ್ಲಿ ಗೋಹತ್ಯೆ ಮಾಡುತ್ತಿರುವುದನ್ನು ನೋಡಿಕೊಂಡು ಇರಲು ಸಾಧ್ಯವೇ ಇಲ್ಲ. ಶಿವಮೊಗ್ಗ ನಗರದಲ್ಲಿ ಗೋಹತ್ಯೆ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಗೋ ಸಂರಕ್ಷಣೆ ಕಾಯ್ದೆ ಜಾರಿಗೆ ತರುವುದು ನಮ್ಮ ಜವಾಬ್ದಾರಿ. ಪಾಲಿಕೆಯಿಂದ 50 ಲಕ್ಷ ರೂ. ಗಳನ್ನು ಇದಕ್ಕಾಗಿಯೇ ಕಾಯ್ದಿರಿಸಿದ್ದೇವೆ. ಗೋವುಗಳ ಸಂರಕ್ಷಣೆ ಮಾಡುತ್ತಿದ್ದೇವೆ ಎಂದರು.

 ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯರಾದ ಎಚ್‌.ಸಿ. ಯೋಗೀಶ್‌ ಹಾಗೂ ನಾಗರಾಜ್‌ ಕಂಕಾರಿ, ಗೋಹತ್ಯೆ ನಿಷೇಧ ಮಾಡುತ್ತೇವೆ ಎನ್ನುವುದು ಆಗದ ಕೆಲಸ. ಅದನ್ನು ಬಿಟ್ಟು ಕಾಯಿದೆ ಏನಿದೆ ಅಷ್ಟು ಮಾತ್ರ ಜಾರಿಗೆ ತನ್ನಿ. ಭಾಷಣ ಮಾಡುವವರು ಯಾರೂ ಪಾಲನೆ ಮಾಡುತ್ತಿಲ್ಲ. ನಿಮ್ಮ ಆವೇಶಭರಿತ ಮಾತುಗಳಿಂದ ಪ್ರಯೋಜನವಿಲ್ಲ. ಗುಜರಾತ್‌ನಲ್ಲೇ ಅತಿ ಹೆಚ್ಚು ಗೋಮಾಂಸ ರಫ್ತಾಗುವುದು ಎಂದು ಕುಟುಕಿದರು. ನಂತರ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಜತೆ ಮೇಯರ್‌, ಆಯುಕ್ತರು ಸ್ಥಳಕ್ಕೆ ಭೇಟ ನೀಡಿ ಪರಿಶೀಲಿಸಲು ತೀರ್ಮಾನಿಸಲಾಯಿತು. 

Advertisement

 ವಿರೋಧ ಪಕ್ಷದ ನಾಯಕ ರಮೇಶ್‌ ಹೆಗ್ಡೆ ಮಾತನಾಡಿ, ಗೋಹತ್ಯೆ ನಿಷೇಧಕ್ಕೆ ನಾವು ವಿರೋಧಿಸುವುದಿಲ್ಲ. ಇಡೀ ದೇಶದಲ್ಲೇ ಗೋಹತ್ಯೆ ನಿಷೇಧಿಸಿ, ಗೋಮಾಂಸ ರಪು¤ ನಿಲ್ಲಿಸಿ ಎಂದರು.  ಸದಸ್ಯೆ ಸುನಿತಾ ಅಣ್ಣಪ್ಪ ಮಾತನಾಡಿ, ಪಾಲಿಕೆಯ ಕೌನ್ಸಿಲ್‌ ಸೆಕ್ರೆಟರಿ ನೇಮಕದಲ್ಲಿ ನಿಯಮ ಉಲ್ಲಂಘನೆ ಆಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಆಯುಕ್ತರು ಇದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

 ಸಭೆಯಲ್ಲಿ ಟಿಪ್ಪುನಗರದ ಭಾಗದ ತುಂಗಾ ಚಾನಲ್‌ ಸರ್ವಿಸ್‌ ರಸ್ತೆ ಅಭಿವೃದ್ಧಿಪಡಿಸುವುದು, ನಗರದ ಸ್ವತ್ಛತೆಗೆ ಗಮನ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next