Advertisement

ತೊಗರಿ ಬೆಳೆ; ಕಾಡುತ್ತಿದೆ ಮಳೆ

04:05 PM Nov 06, 2019 | Naveen |

ಉಮೇಶ ಬಳಬಟ್ಟಿ
ಇಂಡಿ:
ಸತತ ಒಂದು ವಾರ ಮಳೆ‌ಯಾಗಿದ್ದರಿಂದ ತಾಲೂಕಿನ ಕೆಲ ಭಾಗದಲ್ಲಿ ತೊಗರಿ ಬೆಳೆ ಹಾಳಾಗುತ್ತಿದೆ. ಈಗ ಮತ್ತೆ ಮಹಾ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಬಹುತೇಕ ತೊಗರಿ ಬೆಳೆ ಹಾಳಾಗಲಿದೆ ಎಂದು ರೈತರು ಚಿಂತಾಕ್ರಾಂತರಾಗಿದ್ದಾರೆ.

Advertisement

ತಾಲೂಕಿನಾದ್ಯಂತ ಒಟ್ಟು 65 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಮೊದಲು ಮಳೆ ಕೊರತೆಯಿಂದ ಸ್ವಲ್ಪ ರೈತರ ಕೆಲ ಹೆಕ್ಟೇರ್‌ ತೊಗರಿ ಒಣಗಿತ್ತು, ಕೆಲ ಭಾಗದಲ್ಲಿ ಮಳೆಯಾಗಿದ್ದರಿಂದ ಉತ್ತಮವಾಗಿ ಬೆಳೆದಿತ್ತು. ಕಳೆದ ಒಂದು ವಾರದಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು ಈಗ ಮಳೆ ಹೆಚ್ಚಾಗಿ ತೊಗರಿ ಗಿಡದಲ್ಲಿನ ಹೂ, ಕಾಯಿ ಜೊತೆಗೆ ತಪ್ಪಲವೂ ಸಹ ಉದುರಿ ನೆಲ ಕಚ್ಚುತ್ತಲಿದೆ. ಮಸಾರಿ ಜಮೀನಿನಲ್ಲಿ ತೊಗರಿಗಳು ನೆಲ ಕಚ್ಚುತ್ತಿವೆ, ಮಡ್ಡಿ ಪ್ರದೇಶದ ತೊಗರಿ ಬೆಳೆ ಮಾತ್ರ ಚೆನ್ನಾಗಿ ಬಂದಿದೆ.

65 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇ. 20 ತೊಗರಿ ಮಳೆ ಹೆಚ್ಚಾಗಿದ್ದರಿಂದ ಹಾಳಾಗಿದೆ. ಒಂದು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿ ಬೆಳೆ ಕೈಗೆ ಬರುವಷ್ಟರಲ್ಲಿ ತೊಗರಿ ಬೀಜ ಖರೀದಿಗೆ 450 ರೂ, ಬಿತ್ತನೆಗೆ 600 ರೂ, ಗೊಬ್ಬರಕ್ಕೆ 1200 ರೂ, ಬೆಳೆ ಬರುವಷ್ಟರಲ್ಲಿ ನಾಲ್ಕು ಬಾರಿ ಔಷಧ ಸಿಂಪರಣೆಗೆ 3-4 ಸಾವಿ ರೂ, ತೊಗರಿ ಕೊಯ್ಲು ಕೊಯ್ದು ರಾಶಿ ಮಾಡಲು 15 ಕಾರ್ಮಿಕರಿಗೆ 1500 ರೂ., ಹೀಗೆ 8 ಸಾವಿರಕ್ಕಿಂತಲೂ ಹೆಚ್ಚಿಗೆ ಹಣ ಖರ್ಚಾಗುತ್ತದೆ.

ಒಂದು ಎಕರೆ ಜಮೀನಿನಲ್ಲಿ 4-5 ಕ್ವಿಂಟಲ್‌ ತೊಗರಿ ಬೆಳೆಯಬಹುದು. ಬೆಳೆದ ತೊಗರಿಗೆ ಯೋಗ್ಯ ದರ ಸಹ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಆ ತೊಗರಿಯೂ ರೈತನ ಕೈ ಸೇರದಿದ್ದರೆ ರೈತ ವರ್ಗ ಬದುಕುವುದೇ ಕಷ್ಟಕರವಾಗುತ್ತದೆ.

ಅಕ್ಟೋಬರ್‌ ತಿಂಗಳಿನಲ್ಲಿ ಕೃಷಿ ಇಲಾಖೆ ಪ್ರಕಾರ 92 ಎಂ.ಎಂ ಮಳೆ ಆಗಬೇಕಿತ್ತು. ಆದರೆ ವಾಡಿಕೆಗಿಂತ ಎರಡು ಪಟ್ಟು ಮಳೆಯಾಗಿದ್ದು ಒಟ್ಟು 177.8 ಎಂ.ಎಂ ಮಳೆಯಾಗಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿನ ರೈತರ ಜಮೀನಿನಲ್ಲಿನ ತೊಗರಿ ಬೆಳೆ ಹಾಳಾಗಿವೆ. ಬೆಳೆ ಹಾಳಾದ ರೈತರಿಗೆ ‌ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ .

Advertisement
Advertisement

Udayavani is now on Telegram. Click here to join our channel and stay updated with the latest news.

Next