ನವದೆಹಲಿ: ಭಾರತದ ಚುನಾವಣಾ ರಾಜಕೀಯದಲ್ಲಿ ಫೇಸ್ ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ವ್ಯವಸ್ಥಿತ ಹಸ್ತಕ್ಷೇಪಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ (ಮಾರ್ಚ್ 16) ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ನಾವು ಸಾಲ ಮಾಡಿ ತುಪ್ಪ ತಿನ್ನುವವರಲ್ಲ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು
ಇಂದು ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಫೇಸ್ ಬುಕ್ ಬಿಜೆಪಿಗೆ ಕಡಿಮೆ ದರದಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸುವ ಆಫರ್ ನೀಡಿರುವುದಾಗಿ ಅಲ್ ಜಝೀರಾ ಮತ್ತು ದ ರಿಪೋರ್ಟರ್ಸ್ ಪ್ರಕಟಿಸಿರುವ ವರದಿಯನ್ನು ಉಲ್ಲೇಖಿಸಿ ಮಾತನಾಡಿದರು.
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಚುನಾವಣಾ ರಾಜಕೀಯದಲ್ಲಿ ಫೇಸ್ ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳು ವ್ಯವಸ್ಥಿತವಾಗಿ ಹಸ್ತಕ್ಷೇಪ ನಡೆಸುವುದನ್ನು ಮತ್ತು ಪ್ರಭಾವ ಬೀರುವುದಕ್ಕೆ ಕಡಿವಾಣ ಹಾಕಬೇಕೆಂದು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸೋನಿಯಾ ಗಾಂಧಿ ಹೇಳಿದರು.
ಯಾರು ಅಧಿಕಾರದಲ್ಲಿದ್ದರೂ ಕೂಡಾ ನಾವು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು. ಭಾವನಾತ್ಮಕವಾಗಿ ಸುಳ್ಳು ಮಾಹಿತಿಗಳ ಮೂಲಕ ಯುವ ಹಾಗೂ ಹಿರಿಯರ ಮನಸ್ಸುಗಳಲ್ಲಿ ದ್ವೇಷವನ್ನು ತುಂಬಿಸಲಾಗುತ್ತಿದೆ. ಅಷ್ಟೇ ಅಲ್ಲ ಫೇಸ್ ಬುಕ್ ನಂತಹ ಕಂಪನಿಗಳಿಗೂ ಇದು ತಿಳಿದಿದ್ದು, ಈ ಮೂಲಕ ಲಾಭ ಮಾಡಿಕೊಳ್ಳುತ್ತಿವೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.
ಈ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಿರುವುದಕ್ಕೆ ಲೋಕಸಭೆಯ ಸ್ಪೀಕರ್ ಗೆ ಧನ್ಯವಾದ ತಿಳಿಸುವುದಾಗಿ ಹೇಳಿರುವ ಸೋನಿಯಾ ಗಾಂಧಿ, ಇದೊಂದು ತುಂಬಾ ಮುಖ್ಯವಾದ ವಿಷಯವಾಗಿದೆ ಎಂದರು.