ಉಡುಪಿ: ಅಂಗವಿಕಲರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ರಾಜ್ಯ ಸರಕಾರ ರೂಪಿಸಿರುವ ಸಾಧನೆ-ಪ್ರತಿಭೆ ಯೋಜನೆಯ ಲಾಭ ಬಹುಪಾಲು ರಾಜ್ಯದ ರಾಜಧಾನಿಗೆ ಸೀಮಿತವಾಗಿದೆ. ಉಳಿದ ಜಿಲ್ಲೆಗಳಿಗೆ ಅನುದಾನವೇ ಬರುತ್ತಿಲ್ಲ.
3 ವರ್ಷಗಳಲ್ಲಿ ಉಡುಪಿ ಜಿಲ್ಲೆಗೆ ನಯಾಪೈಸೆ ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಕೇವಲ 30 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. 3 ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಿಡುಗಡೆಯಾಗಿರುವ 1.52 ಕೋ.ರೂ.ಗಳಲ್ಲಿ 87.52 ಲ. ರೂ. ಬೆಂಗಳೂರು ನಗರ ಜಿಲ್ಲೆಯ ಪಾಲಾಗಿದೆ.
ಬಾಗಲಕೋಟೆ, ರಾಮನಗರ, ಧಾರವಾಡ ಜಿಲ್ಲೆಗಳು ತಲಾ 5 ಲಕ್ಷ ರೂ. ಅನುದಾನ ಪಡೆದಿವೆ. ಹಾಸನ, ಮೈಸೂರು, ಮಂಡ್ಯ, ಕೋಲಾರ ಮೊದಲಾದ ಜಿಲ್ಲೆಗಳಿಗೆ ತಲಾ 4 ಲ.ರೂ.ಗಳಿಗಿಂತಲೂ ಕಡಿಮೆ ಅನುದಾನ ಸಿಕ್ಕಿದೆ. ಯಾದಗಿರಿ, ತುಮಕೂರು, ಕೊಪ್ಪಳ, ಹಾವೇರಿ, ದಾವಣಗೆರೆ, ಚಾಮರಾಜನಗರ, ಚಿತ್ರದುರ್ಗ, ಬೀದರ್ ಜಿಲ್ಲೆಗಳಿಗೂ ನಯಾಪೈಸೆ ಹೋಗಿಲ್ಲ. ಬೆಂಗಳೂರು ನಗರದಲ್ಲೇ ಬಹುತೇಕ ಅಂಗವಿಕಲರು ಕ್ರೀಡಾ ತರಬೇತಿ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಆ ಜಿಲ್ಲೆಗೆ ಹೆಚ್ಚು ಅನುದಾನ ಹೋಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅನುದಾನ ಬರದಿರಲು ಕಾರಣ
ಸಾಧನೆ-ಪ್ರತಿಭೆ ಯೋಜನೆಯ ಬಗ್ಗೆ ಅಂಗವಿಕಲರಿಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು ಪ್ರಮುಖ ಅಂಶವಾದರೆ ಯೋಜನೆಯ ಲಾಭ ಪಡೆಯಲು ಸರಕಾರ ವಿಧಿಸಿರುವ ಕಠಿನ ಷರತ್ತು ಕೂಡ ಕಗ್ಗಂಟಾಗಿದೆ. ಬಿಡುಗಡೆಯಾದ ಅನುದಾನದ ಮೊತ್ತಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರಿಂದ ಬಳಕೆ ಪ್ರಮಾಣ ಪತ್ರ ನೀಡಬೇಕು. ಬಿಡುಗಡೆಯಾದ ಮೊತ್ತದಲ್ಲಿ ಉಳಿತಾಯವಾದಲ್ಲಿ ಸರಕಾರಕ್ಕೆ ಮರಳಿಸಬೇಕು. ಇಲಾಖೆಯು ಕೇಳಿದ ಸಂದರ್ಭದಲ್ಲಿ ಅನುದಾನಕ್ಕೆ ಬಳಸಿದ ವೋಚರ್, ರಿಜಿಸ್ಟರ್ ಮೊದಲಾದ ಲೆಕ್ಕಪತ್ರ ಒದಗಿಸಬೇಕು. ಅನುದಾನ ಬಿಡುಗಡೆಗೂ ಮೊದಲು 10 ರೂ.ಗಳ ಛಾಪಾ ಕಾಗದದಲ್ಲಿ ರಾಜ್ಯಪಾಲರಿಗೆ ಅನುದಾನ ಷರತ್ತುಗಳಿಗೆ ಬದ್ಧರಾಗಿರುವ, ಷರತ್ತು ಉಲ್ಲಂ ಸದಿರುವ ಹಾಗೂ ಅನ್ಯ ಉದ್ದೇಶಕ್ಕೆ ಅನುದಾನ ಬಳಸದಿರುವ ಬಗ್ಗೆ ಇಬ್ಬರು ಸಾಕ್ಷಿ ಸಹಿತ ಮುಚ್ಚಳಿಕೆ ನೀಡಬೇಕು. ಈ ರೀತಿ ನಿಯಮಗಳಿಂದ ಅನೇಕರು ಅರ್ಜಿ ಸಲ್ಲಿಸಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Related Articles
ಇನಾಮು ಎಷ್ಟು?
ರಾಷ್ಟ್ರ ಅಥವಾ ಅಂತಾರಾಷ್ಟ್ರ ಮಟ್ಟದಲ್ಲಿ ಕ್ರೀಡೆಯ ಮೂಲಕ ರಾಜ್ಯವನ್ನು ಪ್ರತಿನಿಧಿಸಿದ್ದಲ್ಲಿ ಅಂತಹ ಸಾಧಕರಿಗೆ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಿಂದ ದೃಢೀಕರಣ ಪತ್ರವನ್ನು ನೀಡಬೇಕಾಗುತ್ತದೆ. ಹಾಗೆಯೇ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ನೋಂದಣಿ ಮಾಡಿಕೊಂಡಿರುವ (ನಿರ್ದಿಷ್ಟ ಸಾಂಸ್ಕೃತಿಕ ಸಂಸ್ಥೆಯು ಎನ್‌ಜಿಒ ರೂಪದಲ್ಲಿರಬೇಕು) ಅಂಗವಿಕಲರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಭೆ ಅನಾವರಣಕ್ಕೆ 2 ಸಾವಿರ ರೂ. ಹಾಗೂ ಸ್ವಯಂಸೇವಾ ಸಂಸ್ಥೆಯಾಗಿದ್ದಲ್ಲಿ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದು ಕೂಡ ಷರತ್ತಿಗೆ ಒಳಪಟ್ಟಿರುತ್ತದೆ.
ಅಂಗವಿಲಕರ ಮಾಹಿತಿ
ಉಡುಪಿ ಜಿಲ್ಲೆಯಲ್ಲಿ ಸುಮಾರು 12,500 ಮಂದಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20,600 ಮಂದಿ ವಿವಿಧ ರೀತಿಯ ಅಂಗವೈಕಲ್ಯ ಹೊಂದಿರುವವರು ಇದ್ದಾರೆ. 2011ರ ಜನಗಣತಿಯ ಅನಂತರ ಅಂಗವಿಕಲರ ಪ್ರತ್ಯೇಕ ಸರ್ವೇ ಆಗಿಲ್ಲ. ಇಲಾಖೆಯೊಂದಿಗೆ ನೋಂದಾಯಿಸಿಕೊಂಡಿರುವ ಅಂಗವಿಕಲರಿಗೆ ಸರಕಾರದ ಸವಲತ್ತುಗಳನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತಿದೆ.
ಸಾಧನೆ-ಪ್ರತಿಭೆ ಯೋಜನೆಯಡಿ ಬರುವ ಅರ್ಜಿಯನ್ನು ಪರಿಶೀಲಿಸಿ, ಕೇಂದ್ರ ಕಚೇರಿಗೆ ಸಲ್ಲಿಸುತ್ತೇವೆ. ಈಗ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತಿದ್ದರೂ ಕರಾವಳಿಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಸರಕಾರದ ಬೇರೆ ಸವಲತ್ತುಗಳು ನೇರವಾಗಿ ಅವರ ಖಾತೆಗೆ ಹೋಗುತ್ತಿವೆ.
– ರತ್ನಾ / ಗೋಪಾಲಕೃಷ್ಣ,
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಉಡುಪಿ/ದ.ಕ.
– ರಾಜು ಖಾರ್ವಿ ಕೊಡೇರಿ