ಚಿಕ್ಕಬಳ್ಳಾಪುರ: ಆಧುನಿಕ ಜೀವನ ಶೈಲಿಗೆ ಸಿರಿಧಾನ್ಯಗಳ ಬಳಕೆ ಪ್ರಸ್ತುತವಾಗಿದ್ದು, ಸಿರಿಧಾನ್ಯ ಬೆಳೆಯಲು ರೈತರಲ್ಲಿ ಉತ್ತೇಜನ ನೀಡುವುದರ ಜೊತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ಫೌಝೀಯಾ ತರುನ್ನುಮ್ ಸೂಚಿಸಿದರು.
ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿರಿಧಾನ್ಯಗಳ ಬೆಳೆಗಳಿಗೆ ಆದ್ಯತೆ ನೀಡಿ ಯುವ ಪೀಳಿಗೆಗಳಿಗೂ ಇಷ್ಟವಾಗುವ ರೀತಿಯಲ್ಲಿ ಸಿರಿಧಾನ್ಯಗಳ ಆಹಾರ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲು ಕ್ರಮ ವಹಿಸಬೇಕು ಎಂದರು. ಕಡಿಮೆ ನೀರಿನಲ್ಲಿ ಬೆಳೆಯಲಾಗುವಂತಹ ಸಿರಿಧಾನ್ಯ ಬೆಳೆಗಳಿಗೆ ಆದ್ಯತೆ ನೀಡಲು ಅರಿವು ಮೂಡಿಸಿ. ಬೆಳೆಗೆ ಉತ್ತಮ ಫಲ ಸಿಗಬೇಕಾದರೆ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಬೇಕು ಎಂದರು.
ಪೋಸ್ಟರ್ ಅಂಟಿಸಿ: ನರೇಗಾ ಯೋಜನೆಯಡಿ ಬರುವ ಸವಲತ್ತುಗಳನ್ನು ಪ್ರತಿಯೊಬ್ಬ ಫಲಾನುಭವಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಹಾಗೂ ರೈತರಲ್ಲಿ ಬೆಳೆಗಳ ಬಗ್ಗೆ ಮಾಹಿತಿ ನೀಡಲು ಆಯಾ ಕೇಂದ್ರಗಳ ಮುಂದೆ ಪೋಸ್ಟ್‌ರ್ ಅಂಟಿಸಿರಬೇಕು ಎಂದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಪಂಕಜ, ಸಹಾಯಕ ಕೃಷಿ ಅಧಿಕಾರಿಗಳದ ಶ್ರೀನಿವಾಸ್, ಮಂಜುನಾಥ ಉಪಸ್ಥಿತರಿದ್ದರು.
ಅಧಿಕಾರಿಗಳು ಕೀಟನಾಶಕ, ರಸಗೊಬ್ಬರ ಹಾಗೂ ಬೀಜ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಇಲಾಖೆ ನಿಯಮಾವಳಿ ಮೀರಿ ನಿಷೇಧಿತ ರಸಾಯನಿಕಗಳು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಿ.
-ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ