ಶಿವಮೊಗ್ಗ: ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಗದಿತ ಬೆಲೆಗೆ ಪೂರೈಸಲಾಗುತ್ತಿರುವ ನಂದಿನಿ ಹಾಲು ಹಾಗೂ ಈ ಹಾಲಿನ ಉತ್ಪನ್ನಗಳನ್ನು ಬಳಸುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವ ರೈತರನ್ನು ಪ್ರೋತ್ಸಾಹಿಸ ಬೇಕೆಂದು ಶಿಮುಲ್‌ನ ನಿವೃತ್ತ ಡೈರಿ ಎಂಜಿನಿಯರ್ ಡಿ.ವಿ. ಮಲ್ಲಿಕಾರ್ಜುನ್ ಮನವಿ ಮಾಡಿದರು.
ಪರೋಪಕಾರಂ ತಂಡದ ತಿರುಗಾಟದ ಅಂಗವಾಗಿ ಭಾನುವಾರ ಶಿಮುಲ್‌ನ ಕಾರ್ಯವೈಖರಿಯನ್ನು ವೀಕ್ಷಿಸಲು ತೆರಳಿದ್ದ ತಂಡದವರನ್ನು ಶಿಮುಲ್ ಆವರಣದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ಲಾಭದ ಉದ್ದೇಶದಿಂದ ಕಳಪೆ ಗುಣಮಟ್ಟದ, ಕಡಿಮೆ ಬೆಲೆಯ, ಬಣ್ಣ- ಬಣ್ಣದ ಪ್ಯಾಕೆಟ್‌ಗಳಲ್ಲಿ ಸಿದ್ಧಪಡಿಸಿದ ಹಾಲು ಹಾಗೂ ಹಾಲಿನ ಉತ್ಪನ್ನವನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳನ್ನು ಬಳಸುವುದರಿಂದ ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ಸಿಗಬಹುದು. ಆದರೆ ಈ ಉತ್ಪನ್ನಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಲಾಭದ ಉದ್ದೇಶವನ್ನಷ್ಟೇ ಹೊಂದದೆ ತಯಾರಿಸಲಾಗುತ್ತಿರುವ ಗುಣಮಟ್ಟದಿಂದ ಕೂಡಿದ ನಂದಿನಿ ಉತ್ಪನ್ನಗಳನ್ನು ಬಳಸಬೇಕೆಂದು ಕರೆ ನೀಡಿದರು.
ಇಡೀ ದೇಶದಲ್ಲಿ ಅಮೂಲ್‌ನ ನಂತರ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅತಿ ಹೆಚ್ಚು ಹಾಲು ಉತ್ಪಾದಿಸುವ ಸಂಸ್ಥೆಯಾಗಿದೆ. ಅಲ್ಲದೆ ಸೈನಿಕರಿಗೆ ಹಾಲಿನ ಉತ್ಪನ್ನಗಳನ್ನು ಪೂರೈಸುವುದರಲ್ಲಿ ಕೆಎಂಎಫ್ ಪ್ರಮುಖ ಸ್ಥಾನದಲ್ಲಿದೆ. ಕನ್ನಡದ ವರನಟ ಡಾ| ರಾಜ್‌ಕುಮಾರ್ ತಮ್ಮ ಜೀವನದಲ್ಲಿ ಕೆಎಂಎಫ್‌ನ ಏಕೈಕ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಅವರ ಪುತ್ರ ದಿ| ಪುನೀತ್ ರಾಜ್ ಕುಮಾರ್ ಸಹ ಯಾವುದೇ ಸಂಭಾವನೆ ಪಡೆಯದೆ ಕೆಎಂಎಫ್‌ನ ಜಾಹೀರಾತು ಪ್ರತಿನಿ ಧಿಯಾಗಿದ್ದರು. ಕೆಎಂಎಫ್‌ನ ವಿಶ್ವಾಸಾರ್ಹತೆಯೇ ಇದಕ್ಕೆ ಕಾರಣ ಎಂದು ತಿಳಿಸಿದರು.
ಶಿಮುಲ್‌ನ ಗುಣಮಟ್ಟ ಮತ್ತು ನಿಯಂತ್ರಣ ವಿಭಾಗದ (ಕ್ಯೂ ಆ್ಯಂಡ್ ಕ್ಯೂ) ಸಹಾಯಕ ಮ್ಯಾನೇಜರ್ ಪಿ.ಮಂಜುನಾಥ ಸ್ವಾಮಿ ಮಾತನಾಡಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಶಿಮುಲ್‌ಗೆ ಪ್ರತಿನಿತ್ಯ ಐದೂವರೆ ಲಕ್ಷ ಲೀಟರ್‌ನಷ್ಟು ಹಾಲು ಪೂರೈಕೆಯಾಗುತ್ತಿದ್ದು, 2 ಲಕ್ಷ 20 ಸಾವಿರ ಲೀ.ನಷ್ಟು ಹಾಲು ಮಾರಾಟವಾಗುತ್ತಿದೆ. ಉಳಿದ ಹಾಲನ್ನು ತುಪ್ಪ, ಕೋವಾ, ಪೇಡಾ ಮತ್ತಿತರೆ ತಿನಿಸುಗಳ ತಯಾರಿಕೆಗೆ ಹಾಗೂ ಶಾಲಾ ಮಕ್ಕಳಿಗೆ ನೀಡಲು ಹಾಲಿನ ಪೌಡರ್ ರೂಪದಲ್ಲಿ ಬಳಸಲಾಗುತ್ತಿದೆ ಎಂದರು.
ಶಿಮುಲ್ ವ್ಯಾಪ್ತಿಯಲ್ಲಿ 1,350 ಹಾಲು ಉತ್ಪಾದಕರ ಸಹಕಾರ ಸಂಘಗಳು ನೋಂದಣಿ ಮಾಡಿಕೊಂಡಿದ್ದು, 1208 ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮಾಹಿತಿ ನೀಡಿದರು.
ಶಿಮುಲ್‌ನ ಅಶ್ವಿನಿ, ಸುರಮ, ನಿವೃತ್ತ ಡೈರಿ ಸೂಪರಿಂಟೆಂಡೆಂಟ್ ಜಗದೀಶ್ ಆರಾಧ್ಯ, ಪರೋಪಕಾರಂನ ಶ್ರೀಧರ್ ಎನ್.ಎಂ., ತ್ಯಾಗರಾಜ್ ಮಿತ್ಯಂತ ಮತ್ತಿತರರು ಇದ್ದರು.