ಮಹಾನಗರ : ಶತಮಾನೋತ್ಸವ ಪೂರೈಸಿದ ಗಾಂಧಿನಗರ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆವರಣ ಗೋಡೆ ಕುಸಿದು 4 ತಿಂಗಳು ಕಳೆದರೂ ದುರಸ್ತಿ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆ ಇನ್ನೂ ಮೀನ ಮೇಷ ಎಣಿಸುತ್ತಿದೆ. ಮಳೆಹಾನಿಯಿಂದ ತತ್ತರಿಸಿದ ಕೆಲವು ಭಾಗಗಳಿಗೆ ಪರಿಹಾರ ನೀಡುವ ಕಾರ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಜುಲೈಯಲ್ಲಿ ಸುರಿದ ಭಾರೀ ಮಳೆಯಿಂದ ಗಾಂಧಿನಗರ ಶಾಲೆಯ ಹಿಂಭಾಗದ 15ರಿಂದ 20 ಮೀಟರ್ ಆವರಣ ಗೋಡೆ ಕುಸಿದಿತ್ತು. ಇದರಿಂದ ಮಕ್ಕಳ ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ನೀಡಿದ್ದರು. ಅವರ ಸೂಚನೆಯಂತೆ ಆವರಣ ಗೋಡೆ ನಿರ್ಮಾಣಕ್ಕೆ 2 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ ಇಲಾಖೆ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು.
ಜಿಲ್ಲಾಧಿಕಾರಿ ಮನವಿಯನ್ನು ಪರಿಶೀಲಿಸಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಶಾಲೆಯ ಆವರಣ ಗೋಡೆ ಕಾಮಗಾರಿ ನಡೆಸುವಂತೆ ಆಗಸ್ಟ್‌ನಲ್ಲಿ ತಾಲೂಕು ಪಂಚಾಯತ್‌ಗೆ ತಿಳಿಸಿದ್ದರು. ಆದಾಗಿ ಮೂರು ತಿಂಗಳು ಕಳೆದರೂ ಶಾಲೆ ಆವರಣ ಗೋಡೆ ಕಾಮಗಾರಿಯ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಜರಗಿಸಿಲ್ಲ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಹಲವು ಬಾರಿ ತಾಲೂಕು ಪಂಚಾಯತ್‌ಗೆ ತೆರಳಿದರೂ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನಲಾಗುತ್ತದೆ. ಕಳೆದ ವರ್ಷ ಶತಮಾನೋತ್ಸವ ಆಚರಿಸಿದ ಸರಕಾರಿ ಶಾಲೆಯಲ್ಲಿ ಪ್ರಸ್ತುತ ಒಂದನೇ ತರಗತಿಯಿಂದ 8ನೇ ತರಗತಿಯ ವರೆಗೆ 185 ಮಕ್ಕಳಿದ್ದು, ಶಾಲೆ ಆವರಣ ಗೋಡೆ ಕುಸಿದಿರುವ ಹಿನ್ನೆಲೆಯಲ್ಲಿ ಮಕ್ಕಳ ಭದ್ರತೆಯ ಬಗ್ಗೆ ಪ್ರಶ್ನೆ ಎದ್ದಿದೆ. ಅಲ್ಲದೆ ಮಕ್ಕಳು ನಿರ್ಮಿಸಿದ ಹೂದೋಟಗಳಿಗೆ ಜಾನುವಾರುಗಳು ನುಗ್ಗಿ ಹಾಳಾಗುವ ಭಯ ಎದುರಾಗಿದೆ.
ಸರಕಾರಿ ಶಾಲೆಗಳಿಗೆ ತೆರಳುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ವಿದ್ಯಾರ್ಥಿಗಳನ್ನು ಕನ್ನಡ ಶಾಲೆಗಳತ್ತ ಸೆಳೆಯಲು ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾರ್ಯಾ ಚರಿಸುತ್ತಿರುವ ಶಾಲೆಯು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಶಾಲೆಯ ಕೂಗಳತೆ ದೂರದಲ್ಲಿ ಶಾಸಕರ ಮನೆ ಇದ್ದು, ಕನ್ನಡ ಮಾಧ್ಯಮ ಶಾಲೆಯ ಸ್ಥಿತಿ ಸುಧಾರಿಸಲು ಸಹಕರಿಸಬೇಕು ಎಂಬುದು ಶಾಲೆಯ ಆಡಳಿತ ಮಂಡಳಿ ಮನವಿ.
ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ
ಆವರಣ ಗೋಡೆ ಕುಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಜರಗಿಸದೆ ಇರುವುದರಿಂದ ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಲು ತಯಾರಿ ನಡೆಸಿವೆ. ರಾಷ್ಟ್ರೀಯ ಕ್ರೈಸ್ತರ ವೇದಿಕೆ ವತಿಯಿಂದ ಭಿಕ್ಷೆ ಬೇಡಿ ಹಣವನ್ನು ಇಲಾಖೆಗೆ ನೀಡಿ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆ ಪದಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಶಾಲೆ ಆವರಣದಲ್ಲೇ ಕಸದ ರಾಶಿ
ಆವರಣ ಗೋಡೆ ಕುಸಿದು ಸಮಸ್ಯೆಯಾಗುತ್ತಿರುವುದು ಒಂದೆಡೆಯಾದರೆ, ಶಾಲೆಯ ಆವರಣ ಗೋಡೆಯಸುತ್ತ ಕಸದ ರಾಶಿ, ಪಾಲಿಕೆಯ ಕಸ ವಿಲೇವಾರಿ ಗಾಡಿಗಳು ನಿಂತು ದುರ್ವಾಸನೆಬೀರುವುದು ಇನ್ನೊಂದೆಡೆ. ಈ ಸಮಸ್ಯೆಗೂ ಪರಿಹಾರ ನೀಡಬೇಕು ಎಂಬುದು ವಿದ್ಯಾರ್ಥಿಗಳ ಅಳಲು.
ಕಚೇರಿ ಅಲೆಯುವುದು ಕೆಲಸವಾಗಿದೆ
ಶಾಲೆಯ ಆವರಣ ಗೋಡೆ ಕುಸಿದ ಕೆಲವೇ ದಿನಗಳಲ್ಲಿ ನಾನು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಿದ್ದೇನೆ. ಆದರೆ ಈವರೆಗೆ ಯಾವುದೇ ಸ್ಪಂದನೆ ಬಂದಿಲ್ಲ. ಹಲವು ಬಾರಿ ಸರಕಾರಿ ಕಚೇರಿಗೆ ತೆರಳಿ ವಿಚಾರಿಸಿದ್ದೇನೆ.
– ಯಶೋದಾ,ಶಾಲಾ ಮುಖ್ಯೋಪಾಧ್ಯಾಯಿನಿ
ಪ್ರಜ್ಞಾ ಶೆಟ್ಟಿ