Advertisement

ಬಿಕೋ ಎನ್ನುತ್ತಿವೆ ಜಿಲ್ಲೆಯ ಬಸ್‌ ನಿಲ್ದಾಣಗಳು

10:19 AM May 23, 2020 | Suhan S |

ಬೈಲಹೊಂಗಲ: ಕೋವಿಡ್‌-19 ಲಾಕ್‌ಡೌನ್‌ ಸಡಿಲಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಸರಕಾರ ಸಾರಿಗೆ ಬಸ್‌ ಸಂಚಾರ ಕಲ್ಪಿಸಿದ್ದರೂ ಸಹ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ ಗೆ ಒಳಪಡಿಸಿ, ಸ್ಯಾನಿಟೈಸ್‌ ಮಾಡಿ ಬಸ್‌ ನಿಲ್ದಾಣದೊಳಗಡೆ ಬಿಡಲಾಗುತ್ತಿದ್ದು, ಬೈಲಹೊಂಗಲ ಸಾರಿಗೆ ಘಟಕದಿಂದ ಸುಮಾರು 28 ಬಸ್‌ಗಳನ್ನು ಬಿಟ್ಟರೂ ಸಹ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದೆ. ಒಂದು ಬಸ್‌ನಲ್ಲಿ ಕೇವಲ 10-15 ಜನರಂತೆ ಹತ್ತುತ್ತಿದ್ದಾರೆ. ಬೆಳಗಾವಿ, ಧಾರವಾಡ, ನೇಸರಗಿ, ಯರಗಟ್ಟಿ, ಮುನವಳ್ಳಿ, ಇಂಚಲ, ಸವದತ್ತಿ, ಸಂಗೊಳ್ಳಿ, ಗರ್ಜೂರ, ಇನ್ನೂ ಹಲವು ಕಡೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು ಮಾತ್ರ ಬಸ್ಸಿನತ್ತ ಸುಳಿಯುತ್ತಿಲ್ಲ. ಇನ್ನು ಕೆಲವೆಡೆ ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಜನ ದ್ವಿಚಕ್ರ ವಾಹನ ಅವಲಂಬಿಸಿದ್ದಾರೆ.

ಅಂಗವಿಕಲರಿಗೆ ಕೆಎಸ್‌ಆರ್‌ಟಿಸಿ ಸಬ್ಸಿಡಿ ದರದ ಪಾಸ್‌ಗಳನ್ನು ನೀಡಲಾಗಿದ್ದರೂ ಅವುಗಳನ್ನು ಸಾರಿಗೆ ನಿಗಮ ಪರಿಗಣಿಸುತ್ತಿಲ್ಲ. ಹಿರಿಯ ನಾಗರಿಕರಿಗೆ ಸಬ್ಸಿಡಿ ದರದ ಪಾಸ್‌ಗಳನ್ನು ವಿತರಿಸಿದ್ದರೂ ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಅನುಮತಿ ಇಲ್ಲದಿರುವದರಿಂದ ಅವರು ಮನೆಯಲ್ಲಿರಬೇಕಾಗಿದೆ. ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಚಾಲಕ, ನಿರ್ವಾಹಕರು, ಸಿಬ್ಬಂದಿಗಳು ಎದ್ದು ಕಾಣುತ್ತಿದ್ದಾರೆ.

ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಎಲ್ಲ ತರಹದ ಸುರಕ್ಷತಾ ಕ್ರಮ ಕೈಗೊಂಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ.– ಚೇತನ ಸಾಣಿಕೊಪ್ಪ, ಸಾರಿಗೆ ಘಟಕ ವ್ಯವಸ್ಥಾಪಕರು, ಬೈಲಹೊಂಗಲ

Advertisement

Udayavani is now on Telegram. Click here to join our channel and stay updated with the latest news.

Next