ಯಾದಗಿರಿ: ಸಾರ್ವಜನಿಕರ ಸರ್ಕಾರಿ ಕೆಲಸ ಕಾರ್ಯಗಳಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಯಾದಗಿರಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಿ ಎಲ್ಲಾ ಇಲಾಖೆಗಳು ಒಂದೆಡೆ ಕೆಲಸ ನಿರ್ವಹಿಸುವಂತೆ ಅನುಕೂಲ ಮಾಡಿದೆ. ಜೊತೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಸಕ್ಕೆ ಭವ್ಯ ವಸತಿ ಗೃಹಗಳ ಸಂಕೀರ್ಣ ನಿರ್ಮಾಣ ಮಾಡಿ ವರ್ಷ ಸಮೀಪಿಸುತ್ತಿದ್ದರೂ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ವಾಸವಾಗಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುವ ಅರ್ಧದಷ್ಟು ಸಿಬ್ಬಂದಿ ನಿತ್ಯ ಕಲಬುರಗಿಯಿಂದ ಯಾದಗಿರಿಗೆ ಅಲೆದಾಟ ನಡೆಸುತ್ತಿರುವುದರಿಂದ ಕಚೇರಿ ಸಮಯ ಪಾಲನೆಯಲ್ಲಿ ಅಡತಡೆ ಉಂಟಾಗುತ್ತಿದೆ. ಜಿಲ್ಲಾಡಳಿತ ಭವನ ನಗರದಿಂದ ಸುಮಾರು 3 ಕೀ.ಮೀಟರ್ ದೂರ ಇರುವುದರಿಂದ ಎಲ್ಲಾ ಸಿಬ್ಬಂದಿಗಳು ಇಲ್ಲಿಯೇ ವಾಸಿಸಲು ಎ,ಬಿ,ಸಿ,ಡಿ ಬ್ಲಾಕ್‌ಗಳಾಗಿ ವಸತಿ ಗೃಹಗಳ ವರ್ಗೀಕರಿಸಲಾಗಿದೆ. ಜಿಪಂ ಅಧಿಕಾರಿಗಳಿಗೆ ಸುಮಾರು 27 ವಸತಿ ಕಟ್ಟಡಗಳು 464.90 ಲಕ್ಷಗಳಲ್ಲಿ ಮತ್ತು ಜಿಲ್ಲಾಧಿಕಾರಿ ಕಾರ್ಯಾಲಯ, ಇನ್ನಿತರ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ 100ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ನಿರ್ಮಿಸಿದೆ.
ಇಲ್ಲಿ ಬೇಕಾದ ರಸ್ತೆ ಸೌಕರ್ಯ, ವಿದ್ಯುತ್ ಕಂಬ ಸಮರ್ಪಕವಾಗಿಲ್ಲ. ಅದನ್ನು ಹೊರತು ಪಡಿಸಿ ಎಲ್ಲಾ ವ್ಯವಸ್ಥೆಗಳು ಇವೆ. ಸರ್ಕಾರ ವಸತಿ ಸೌಕರ್ಯ ಒದಗಿಸಿದರೂ ಏಕೆ ಸಿಬ್ಬಂದಿ ವಾಸಿಸಲು ಹಿಂದೇಟು ಹಾಕುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸಿಬ್ಬಂದಿಗಳ ಹೆಸರಿಗೆ ಕಟ್ಟಡಗಳ ಹಂಚಿಕೆ ಮಾಡಿದ್ದಾರೆ.
ಕೆಲವರು ಬಂದಿದ್ದು, ಎಲ್ಲರೂ ಇಲ್ಲಿಯೇ ವಾಸಿಸುವಂತೆ ಸೂಚಿಸಲು ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. 15 ದಿನ ಸಮಯಾವಕಾಶ ನೀಡಿದ್ದು, ಇಲ್ಲದಿದ್ದರೇ ಬೇರೆಯವರ ಹೆಸರಿನಲ್ಲಿ ಹಂಚಿಕೆ ಮಾಡಲಾಗುವುದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಭವ್ಯ ವಸತಿ ಕಟ್ಟಡ ಇದೆ. ಆದರೆ ಮೂಲ ಸೌಯರ್ಕಗಳಿಲ್ಲ. ಕಾಂಪೌಂಡ್ ನಿರ್ಮಾಣ ಮಾಡಬೇಕು. ಸುತ್ತಲು ಬಯಲು ಇದ್ದು, ರಕ್ಷಣೆ ಇಲ್ಲದಂತಿದೆ. ಹಾಗಾಗಿ ಸಿಬ್ಬಂದಿ ವಾಸಿಸಲು ಮುಂದೆ ಬರುತ್ತಿಲ್ಲ. ಬಹುತೇಕ ಸಿಬ್ಬಂದಿ ಕಲಬುರಗಿ, ರಾಯಚೂರಿನಿಂದ ಬರುವವರಿದ್ದಾರೆ. ಅವರು ಬರುವವರೆಗೆ
ಸಾರ್ವಜನಿಕರು ಕಾಯಬೇಕಿರುವ ಪರಿಸ್ಥಿತಿ ರ್ಮಾಣವಾಗಿದೆ.
ಭೀಮು ನಾಯಕ. ಕರವೇ ಜಿಲ್ಲಾಧ್ಯಕ್ಷ
ಈಗಾಗಲೇ ವಸತಿ ಗೃಹಗಳ ಹಂಚಿಕೆ ಮಾಡಲಾಗಿದೆ. ಕೆಲವರು ವಾಸಿಸುತ್ತಿದ್ದಾರೆ. ಎಲ್ಲರೂ ವಾಸಿಸುವಂತೆ ಸಿಬ್ಬಂದಿಗಳಿಗೆ ನೋಟಿಸ್ ನೀಡಲಾಗಿದೆ. 15 ದಿನದಲ್ಲಿ ವಾಸಿಸದಿದ್ದರೇ ಹಿರಿತನದ ಆಧಾರದಲ್ಲಿ ಬೇರೆ ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು.
ಎಂ. ಕೂರ್ಮಾರಾವ್, ಜಿಲ್ಲಾಧಿಕಾರಿ
ಅನೀಲ ಬಸೂದೆ