Advertisement

ಆ್ಯಪ್‌ ಮೂಲಕ ಮರಳು ವಿತರಣೆ ತಾತ್ಕಾಲಿಕ ಸ್ಥಗಿತ

12:04 PM Jul 29, 2019 | Team Udayavani |

ಬಂಟ್ವಾಳ: ಬಿ.ಸಿ. ರೋಡ್‌ ತಲಪಾಡಿಯ ಮರಳು ಸಂಗ್ರಹಾಗಾರದಿಂದ ಸ್ಯಾಂಡ್‌ ಬಝಾರ್‌ ಆ್ಯಪ್‌ ಮೂಲಕ ನಡೆಯುತ್ತಿದ್ದ ಮರಳು ಕಾಯ್ದಿರಿಸುವಿಕೆ ಮತ್ತು ವಿತರಣೆಯನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿರುವುದು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಡ್ರೆಜ್ಜಿಂಗ್‌ ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಕ್ಕಿಂಗ್‌ ಮತ್ತು ಮರಳು ವಿತರಣೆಯನ್ನು ನಿಲ್ಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ವೆಬ್‌ಸೈಟ್‌ ಪ್ರಕಟನೆ ತಿಳಿಸಿದೆ

Advertisement

ಮೂರ್ನಾಲ್ಕು ದಿನಗಳಿಂದ ಆನ್‌ಲೈನ್‌ನಲ್ಲಿ ಮರಳು ಬುಕ್ಕಿಂಗ್‌ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಕೂಲ ಹವಾಮಾನದಿಂದ ಮುಂದಿನ ಪ್ರಕಟನೆಯವರೆಗೆ ಮರಳು ಬುಕ್ಕಿಂಗ್‌ ಅನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಸ್ವೀಕರಿಸಿರುವ ಬುಕ್ಕಿಂಗ್‌ಗಳನ್ನು ಆದ್ಯತೆಯ ಮೇರೆಗೆ ಸರಬರಾಜು ಮಾಡಿ ವಿಲೇವಾರಿ ಮಾಡಲಾಗುವುದು. ಅದೇ ರೀತಿ ಮನೆ ಕಟ್ಟುವವರು ಆಯಾ ಗ್ರಾಮ ಪಂಚಾಯತ್‌ನ ಅನುಮತಿ ಪತ್ರ, ಆರ್‌ಟಿಸಿ, ಅಗತ್ಯ ಬೇಕಾಗಿರುವ ಮರಳಿನ ಅಂದಾಜು ಮತ್ತು ಮನೆ ಅಥವಾ ಜಾಗದ ಚಿತ್ರದೊಂದಿಗೆ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲದೆ, ಸಾಲೆತ್ತೂರು ಗ್ರಾಮದ ಬುಕ್ಕಿಂಗ್‌ ಅನ್ನು ತಡೆಹಿಡಿಯಲಾಗಿದೆ ಎಂದು ವಿವರಿಸಲಾಗಿದೆ.

ಡ್ರೆಜ್ಜಿಂಗ್‌ ಆಗುತ್ತಿಲ್ಲ
ಡ್ರೆಜ್ಜಿಂಗ್‌ ಯಂತ್ರದ ಮೂಲಕ ಪಂಪ್‌ ಆದ ಹೂಳನ್ನು ಕಾಂಕ್ರಿಟೀಕೃತ ಹೊಂಡದಲ್ಲಿ ಸಂಗ್ರಹಿಸಿ ಅಲ್ಲಿಂದ ಹಿಟಾಚಿಗಳ ಮೂಲಕ ಲಾರಿಗಳಿಗೆ ತುಂಬಿ ಯಾರ್ಡ್‌ಗೆ ಸಾಗಿಸಲಾಗುತ್ತದೆ. ಆದರೆ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾದ ಕಾರಣ ಡ್ರೆಜ್ಜಿಂಗ್‌ಗೆ ಅಡಚಣೆ ಉಂಟಾಗುತ್ತಿದೆ. ಡ್ರೆಜ್ಜಿಂಗ್‌ ಮಾಡಿದರೂ ಪೈಪ್‌ನಲ್ಲಿ ನೀರು ಮಾತ್ರ ಬರುತ್ತದೆ, ಮರಳು ಬರುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಭಾರೀ ಬೇಡಿಕೆ
ದಿನದಿಂದ ದಿನಕ್ಕೆ ಮರಳಿಗಾಗಿ ಬೇಡಿಕೆ ಹೆಚ್ಚಾಗತೊಡ ಗಿದೆ. ಈ ಮೊದಲು ಆನ್‌ಲೈನ್‌ ಮೂಲಕ ಕಾಯ್ದಿರಿಸಿದ ಎಲ್ಲರಿಗೂ ಮರಳು ಪೂರೈಕೆ ಮಾಡಲಾಗುತ್ತಿತ್ತು. ದಿನವೂ ನೂರಾರು ಟಿಪ್ಪರ್‌, ಲಾರಿಗಳು ಈ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದವು. ಬೇಡಿಕೆ ಹೆಚ್ಚಾಗಿ ಯಾರ್ಡ್‌ನಲ್ಲಿ ಮರಳಿನ ಕೊರತೆ ಉಂಟಾದ ಬಳಿಕ ದಿನಕ್ಕೆ 100 ಬುಕ್ಕಿಂಗ್‌ಗಳಿಗೆ ಮಾತ್ರ ಮರಳು ಪೂರೈಕೆ ಮಾಡಲಾಗುತ್ತಿತ್ತು. ಈಗ ಬೇಡಿಕೆ ಮತ್ತಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ದಿನಕ್ಕೆ ಒಂದು ನಂಬರಿಗೆ ಒಂದೇ ಲೋಡ್‌ ಮರಳು ನೀಡುವ ವ್ಯವಸ್ಥೆ ಮಾಡಲಾಗಿದೆ.

ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮತ್ತು ಅಕ್ರಮ ಚಟುವಟಿಕೆಗಳಿಗೆ ಹಣ ಪೂರೈಕೆಯಾಗುತ್ತಿತ್ತು. ಇದನ್ನೆಲ್ಲ ತಡೆಗಟ್ಟುವಲ್ಲಿ ಜಿಲ್ಲಾಧಿಕಾರಿ ಅವರ ಈ ಹೊಸ ಯೋಜನೆಯು ಯಶಸ್ವಿಯಾಗಿದ್ದು, ಈ ಕಾರ್ಯ ಶ್ಲಾಘನೀಯ. ಇದೇ ರೀತಿಯಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮರಳು ಧಕ್ಕೆ ನಿರ್ಮಿಸುವ ಕೆಲಸ ಆಗಬೇಕು. ಇಂತಹ ಮರಳು ನೀತಿಗೆ ಸಂಪೂರ್ಣ ಬೆಂಬಲ ನೀಡಬೇಕು.
– ಬೊಂಡಾಲ ಚಿತ್ತರಂಜನ್‌ ಶೆಟ್ಟಿ, ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಇಂಟಕ್‌)

Advertisement
Advertisement

Udayavani is now on Telegram. Click here to join our channel and stay updated with the latest news.

Next