Advertisement

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

04:24 PM Nov 05, 2024 | Team Udayavani |

ಮಹಾನಗರ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಆಟೋ ಚಾಲಕರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದ್ದಾರೆ.

Advertisement

ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರವೇ ಪ್ರಿ ಪೇಯ್ಡ್ ಆಟೋ ವ್ಯವಸ್ಥೆ ಇದೆ. ಅನಂತರ ವಂದೇಭಾರತ್‌ ರೈಲುಗಳು ಸಹಿತ ಹಲವಾರು ರೈಲುಗಳು ನಿಲ್ದಾಣಕ್ಕೆ ಬರುತ್ತವೆ. ಅದರಲ್ಲಿ ಬರುವ ಪ್ರಯಾಣಿಕರಿಗೆ ಪ್ರೀ ಪೇಯ್ಡ್ ಆಟೋ ಸಿಗುತ್ತಿಲ್ಲ. ಈ ಪ್ರಯಾಣಿಕರಿಂದ ಕೆಲವು ಆಟೋರಿಕ್ಷಾ ಚಾಲಕರು ತೀರಾ ಹೆಚ್ಚಿನ ಬಾಡಿಗೆಯನ್ನು ವಸೂಲಿ ಮಾಡುತ್ತಾರೆ. ಆಟೋರಿಕ್ಷಾ ನಿಲ್ದಾಣದಲ್ಲಿ ಬಾಡಿಗೆದರದ ವಿಷಯವಾಗಿ ಚರ್ಚೆ, ಗಲಾಟೆಗಳು ನಡೆಯುತ್ತವೆ. ಪೊಲೀಸರು ಕೂಡ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರು ಬೇರೆ ಉಪಾಯವಿಲ್ಲದೆ ಹೆಚ್ಚಿನ ಬಾಡಿಗೆಗೆ ಒಪ್ಪಿಕೊಂಡು ಮನೆ ಸೇರುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಯಾಕೆ ಇಲ್ಲ?
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9.30ರ ವರೆಗೂ ಪ್ರಿ ಪೇಯ್ಡ ಆಟೋರಿಕ್ಷಾ ಕೌಂಟರ್‌ ತೆರೆದಿರುತ್ತದೆ.

ಮನಬಂದಂತೆ ಬಾಡಿಗೆ ದರ
ನಾನು ರಾತ್ರಿ 11.30ಕ್ಕೆ ವಂದೇಭಾರತ್‌ ರೈಲಿನಲ್ಲಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಬಂದಾಗ ಅಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್‌ ಇರಲಿಲ್ಲ. ಇದರಿಂದ ನನಗೆ ತುಂಬಾ ತೊಂದರೆಯಾಗಿದೆ. ರಾತ್ರಿ ವೇಳೆಯೂ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯ ರೈಲುಗಳು ಬರುತ್ತವೆ. ಸಾವಿರಾರು ಮಂದಿ ಪ್ರಯಾಣಿಕರು ಆಗಮಿಸುತ್ತಾರೆ. ಹಾಗಾಗಿ ಕೂಡಲೇ ರಾತ್ರಿಯೂ ಪ್ರಿಪೇಯ್ಡ್ ಆಟೋ ಕೌಂಟರ್‌ ಆರಂಭಿಸಬೇಕು.
-ನಂದ ಗೋಪಾಲ ಶೆಣೈ, ಕದ್ರಿಕಂಬಳ, ಮಂಗಳೂರು

ಅಧಿಕ ಬಾಡಿಗೆ ವಸೂಲಿ ಮಾಡಿದರೆ ದೂರು ನೀಡಿ
ರೈಲುಗಳ ಸಂಖ್ಯೆ, ಪ್ರಯಾಣಿಕರ ಸಂಖ್ಯೆ ರಾತ್ರಿ ವೇಳೆ ತುಂಬಾ ಕಡಿಮೆ ಇರುವುದರಿಂದ ರಾತ್ರಿ ವೇಳೆ ಪ್ರಿ ಪೇಯ್ಡ್ ಆಟೋ ರಿಕ್ಷಾ ಕೌಂಟರ್‌ ತೆರೆಯುವುದು ಕಷ್ಟಸಾಧ್ಯವಾಗುತ್ತಿದೆ. ಒಂದು ವೇಳೆ ರಾತ್ರಿ ಪ್ರಿ ಪೇಯ್ಡ್ ಇಲ್ಲದ ಸಂದರ್ಭದಲ್ಲಿ ಯಾವುದೇ ಆಟೋರಿಕ್ಷಾದ ಚಾಲಕ ಮೀಟರ್‌ನ ಒಂದೂವರೆ ಪಟ್ಟು ಹೆಚ್ಚಿನ ಬಾಡಿಗೆ ದರಕ್ಕಿಂತ ಅಧಿಕ ವಸೂಲಿ ಮಾಡಿದರೆ ಆ ಆಟೋರಿಕ್ಷಾದ ನಂಬರ್‌ ದಾಖಲಿಸಿಕೊಂಡು ಆರ್‌ಟಿಒ ಅಥವಾ ಪೊಲೀಸರಿಗೆ ದೂರು ನೀಡಬಹುದು.
-ಶರಣ್‌ಪ್ರಿ ಪೇಯ್ಡ, ಆಟೋ ರಿಕ್ಷಾ ಕೌಂಟರ್‌ ನಿರ್ವಾಹಕರು

Advertisement

ಸೂಕ್ತ ಕ್ರಮ
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್‌ ಇಲ್ಲದೆ ಸಮಸ್ಯೆಯಾಗುತ್ತಿರುವ ಬಗ್ಗೆ ಕೆಲವು ಪ್ರಯಾಣಿಕರಿಂದ ದೂರುಗಳು ಬಂದಿವೆ. ಮುಂದಿನ ಆರ್‌ಟಿಒ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶ್ರೀಧರ್‌ ಮಲ್ಲಾಡ್‌, ಆರ್‌ಟಿಒ ಮಂಗಳೂರು

ಅನಂತರ ರೈಲುಗಳ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿ ಕೌಂಟರ್‌ ನಡೆಸುವುದು ಸಾಧ್ಯವಾಗುವುದಿಲ್ಲ. ಸಿಬಂದಿಗೆ ಸಂಬಳ ಪಾವತಿಸುವುದಕ್ಕೂ ಕಷ್ಟವಾಗುತ್ತದೆ. ಆದರೆ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ರಾತ್ರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಆಗಮಿಸುವುದರಿಂದ ಅಲ್ಲಿ ರಾತ್ರಿ ಕೂಡ ಪ್ರಿ ಪೇಯ್ಡ್ ಆಟೋರಿಕ್ಷಾ ಕೌಂಟರ್‌ ತೆರೆದಿರುತ್ತದೆ ಎನ್ನುತ್ತಾರೆ ಸೆಂಟ್ರಲ್‌ ರೈಲು ನಿಲ್ದಾಣದ ಪ್ರಿ ಪೇಯ್ಡ್ ಆಟೋ ರಿಕ್ಷಾ ಕೌಂಟರ್‌ ನಿರ್ವಹಿಸುತ್ತಿರುವವರು.

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next