Advertisement

ಸಂದರ್ಶಿತ 8926 ಅಭ್ಯರ್ಥಿಗಳಲ್ಲಿ 2594 ಮಂದಿಗೆ ಉದ್ಯೋಗ

07:27 AM Feb 18, 2019 | Team Udayavani |

ತುಮಕೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಉದ್ಯೋಗ ಮೇಳದಲ್ಲಿ ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಸಂದರ್ಶನಕ್ಕೆ ಹಾಜರಾಗಿದ್ದ 8926 ಅಭ್ಯರ್ಥಿಗಳಲ್ಲಿ 2594 ಮಂದಿ ನೇರ ನೇಮಕಾತಿ ಮೂಲಕ ಉದ್ಯೋಗ ಪಡೆದುಕೊಂಡು ಸಂತಸಪಟ್ಟರು. 

Advertisement

ಸಾವಿರಾರು ನಿರುದ್ಯೋಗಿ ಯುವಕ ಯುವತಿಯರು ಕೈಯಲ್ಲಿ ಅಗತ್ಯ ದಾಖಲೆಗಳನ್ನು ಹಿಡಿದು ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನಕ್ಕೆ ಬಂದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವಿವಿಧ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ನೇಮಕಾತಿ ಪತ್ರ ಕೈ ಸೇರಿದಾಗ ನಿರುದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸಾವಿರಾರು ನಿರುದ್ಯೋಗಿಗಳು ಆಗಮಿಸಿ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರು.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಮಳೆ ಬೆಳೆ ಇಲ್ಲದೆ ಬಯಲುಸೀಮೆಯ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೂ ವಿದ್ಯೆಗೆ ತಕ್ಕ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ.

ಹೀಗಾಗಿ ಸರ್ಕಾರ ಕೆಲವು ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ರಾಜ್ಯಾದ್ಯಂತ ನಡೆಸುತ್ತಿದೆ. ಹಲವು ಕಂಪನಿಗಳು ತಮಗೆ ಬೇಕಾದ ಅಭ್ಯರ್ಥಿಗಳು ಸ್ಥಳದಲ್ಲೇ ಆಯ್ಕೆ ಮಾಡಿಕೊಂಡು ನೇಮಕಾತಿ ಪತ್ರವನ್ನೂ ನೀಡುತ್ತಿರುವುದು ಸಂತಸ ತರಿಸಿದೆ ಎಂದು ಅಭ್ಯರ್ಥಿಗಳ ಜತೆ ಬಂದಿದ್ದ ಪೋಷಕರು ಹೇಳಿದರು.

Advertisement

21,155 ಮಂದಿ ನೋಂದಣಿ: ತುಮಕೂರು-ಚಿತ್ರದುರ್ಗ ಜಿಲ್ಲೆಯ ಜಿಲ್ಲಾಡಳಿತಗಳು ಏರ್ಪಡಿಸಿರುವ ಎರಡು ದಿನಗಳ ಉದ್ಯೋಗ ಮೇಳವು ವ್ಯವಸ್ಥಿತವಾಗಿತ್ತು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಮೇಳವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲೂ ತೊಂದರೆಯಾಗದಂತೆ ನೋಡಿಕೊಂಡರು. ಮೇಳದಲ್ಲಿ 21,155 ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8926 ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು.

1413 ಅಭ್ಯರ್ಥಿಗಳಿಗೆ ಭರವಸೆ: ಉದ್ಯೋಗದಾತ ಕಂಪನಿಗಳು 120 ಇದ್ದವು. ಅದರಲ್ಲಿ 2594 ಅಭ್ಯರ್ಥಿಗಳನ್ನು ವಿವಿಧ ಕಂಪನಿಯ ಮುಖ್ಯಸ್ಥರು ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಂಡರು. ಇನ್ನು 1413 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ. ನಿರುದ್ಯೋಗಿ ಯುವಕ ಯುವತಿಯರು ನೇಮಕಾತಿ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಎರಡು ದಿನ ನಡೆದ ಮೇಳದಲ್ಲಿ ಆಗಮಿಸಿದ ನಿರುದ್ಯೋಗಿಗಳು ಶಿಸ್ತು ಬದ್ಧವಾಗಿ ಭಾಗವಹಿಸಿ ಸಾಲಿನಲ್ಲಿ ನಿಂತು ಮೇಳದಲ್ಲಿ ಯಾವುದೇ ರೀತಿಯ ಗದ್ದಲಗಳಾಗದಂತೆ ನಡೆದುಕೊಂಡರು. ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ವ್ಯವಸ್ಥಿತವಾಗಿ ಉದ್ಯೋಗ ಮೇಳ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next