Advertisement
ನೀತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಂದಿನ ಸಂಪುಟದಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೂತನ ಉದ್ಯೋಗ ನೀತಿಯು ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಉದ್ಯಮ ವಲಯದಲ್ಲಿ ಬೇಡಿಕೆಯಲ್ಲಿರುವ ಕೌಶಲದ ತರಬೇತಿಗೂ ಆದ್ಯತೆ ನೀಡಬೇಕು ಎಂದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಉದ್ಯೋಗ ನೀತಿ ಕುರಿತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಶಾಲಾ ಹಂತದಲ್ಲಿಯೇ ತಾಂತ್ರಿಕ ತರಬೇತಿ ನೀಡುವ ಟೆಕ್ನಿಕಲ್ ಸ್ಕೂಲ್‌ಗಳನ್ನು ಸ್ಥಾಪಿಸಬೇಕು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ತಲಾ ನಾಲ್ಕು ಹೈಸ್ಕೂಲ್‌ಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಈ ಶಿಕ್ಷಣ ನೀಡಬೇಕು. ರಾಜ್ಯದಲ್ಲಿ ಈಗಾಗಲೇ ಉನ್ನತೀಕರಿಸಿದ ಐಟಿಐಗಳು ಹಾಗೂ ಜಿಟಿಟಿಸಿಗಳಲ್ಲಿ ಅಲ್ಪಾವಧಿಯ ಕೌಶಲಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಐಟಿ ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ| ಎಸ್. ಸೆಲ್ವಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Related Articles
ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕೋದ್ಯಮಗಳು ಕೌಶಲಾಭಿವೃದ್ಧಿ ತರಬೇತಿ ನಡೆಸಲು ಉತ್ತೇಜನ ನೀಡಬೇಕು. ಹಾಗೂ ರಾಜ್ಯದಲ್ಲಿ ಸೃಜನೆಯಾಗುವ ಉದ್ಯೋಗಾವಕಾಶಗಳು ಹಾಗೂ ಉದ್ಯೋಗ ಪಡೆದವರ ದತ್ತಾಂಶ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಬೇಕು. ಅಲ್ಲದೆ, ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯಲ್ಲಿ ಅನುಮೋದನೆಯಾದ ಯೋಜನೆಗಳು ನಿಗದಿತ ಅವಧಿಯಲ್ಲಿ ಜಾರಿಗೊಂಡಿವೆಯೇ? ಇಂತಹ ಕೈಗಾರಿಕೋದ್ಯಮಗಳು ತಮಗೆ ಹಂಚಿಕೆಯಾಗಿರುವ ಭೂಮಿಯನ್ನು ಬಳಸಿಕೊಂಡಿವೆಯೇ ಎಂದು ವರದಿ ಸಲ್ಲಿಸುವಂತೆ ಹಾಗೂ ನಿಗದಿತ ಅವಧಿಯಲ್ಲಿ ಜಾರಿಯಾಗದ ಯೋಜನೆಗಳಿಗೆ ಹಂಚಿಕೆಯಾದ ಭೂಮಿಯನ್ನು ಹಿಂಪಡೆಯುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
Advertisement