Advertisement

ಕನ್ನಡ ಕಲಿತರೆ ಉದ್ಯೋಗ; ಕನ್ನಡ ಮಾಧ್ಯಮ ಓದಿದವರಿಗೆ 5% ಮೀಸಲು

03:45 AM Jul 07, 2017 | |

ಬೆಂಗಳೂರು: ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಆತಂಕಕಾರಿ ಸನ್ನಿವೇಶದಲ್ಲೇ ರಾಜ್ಯ ಸರ್ಕಾರ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದವರಿಗೆ ನಾಗರಿಕ ಸೇವೆಯ ಹುದ್ದೆಗಳಲ್ಲಿ ಶೇ.5 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ.

Advertisement

ದೇಶದ ಯಾವುದೇ ಭಾಗದ ಕನ್ನಡ ಶಾಲೆಯಲ್ಲಿ ಓದಿದ್ದರೂ ಸಹ, ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ)ಗೆ ಪರಿಗಣಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮ 1977ಕ್ಕೆ ತಿದ್ದುಪಡಿ ತಂದು, ಇದಕ್ಕೆ ನಿಯಮ 9(1)(ಸಿ) ಸೇರ್ಪಡೆಗೊಳಿಸಲಾಗಿದೆ. ಇದರ ಮೂಲಕ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಪ್ರಕಾರವೇ ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ.5 ರಷ್ಟು ಮೀಸಲಾತಿ ನೀಡಲಾಗುತ್ತದೆ.

ಹೀಗಾಗಿ, ಇಂಥ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವಾಗ ಮೇಲ್ಕಂಡ ಅಂಶಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸುವಂತೆ ಎಲ್ಲ ಆಯ್ಕೆ/ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರೋಜಿನಿ ಮಹಿಷಿ ಪರಿಷ್ಕೃತ ವರದಿ
ಈ ಹಿಂದೆ ಗಡಿ ಭಾಗ ಹಾಗೂ ಹೊರ ರಾಜ್ಯದಲ್ಲಿ 1 ರಿಂದ 10 ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉನ್ನತ ಶಿಕ್ಷಣದಲ್ಲಿ ಮಾತ್ರ ಮೀಸಲಾತಿ ಮತ್ತು ಇತರೆ ಸೌಲಭ್ಯ ಇತ್ತು.  ಮೀಸಲಾತಿ ಸೌಲಭ್ಯವನ್ನು  ಉದ್ಯೋಗಕ್ಕೂ ವಿಸ್ತರಿಸಬೇಕು ಹಾಗೂ ಇದಕ್ಕಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರನ್ನು ಪರಿಗಣಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಇದು ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಸೇರಿದಂತೆ ದೆಹಲಿಯಲ್ಲಿರುವ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೂ ಅನ್ವಯವಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next