ಧಾರವಾಡ: ಇಂದಿನ ದಿನಗಳಲ್ಲಿ ಕೆಲಸ ಹುಡುಕುವರಿಗಿಂತ ಕೆಲಸ ನೀಡುವವರ ಸಂಖ್ಯೆ ಹೆಚ್ಚಾಗಬೇಕಿದ್ದು, ಸಂಶೋಧನೆ ಮತ್ತು ಅನ್ವೇಷಣೆ ಕೇವಲ ಬೆಂಗಳೂರಿಗೆ ಸಿಮೀತವಾಗಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಬೇಲೂರಿನ ಸಿಡಾಕ್ ಸಭಾಭವನದಲ್ಲಿ ನಡೆದ ಕ್ರಿಟಿಕಲ್ ಇನ್‌ಫ್ರಾಸ್ಟಕ್ಚರ್ ಯೋಜನೆ ಮತ್ತು ವಿವಿಧ ಕಾಮಗಾರಿ ಅಡಿಗಲ್ಲು, ಮೂಲೆಗಲ್ಲು ಮತ್ತು ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬುದ್ಧಿಜೀವಿಗಳ ನಾಡು ಎಂದು ಗುರುತಿಸಿಕೊಂಡಿರುವ ಧಾರವಾಡದಲ್ಲಿಯೂ ಕೈಗಾರಿಕೆಗೆ ಸಂಬಂಧಿಸಿದಂತೆ ನೂತನ ಸಂಶೋಧನೆ ಮಾಡಿ ತಾಂತ್ರಿಕ ಅಭಿವೃದ್ಧಿ ಸಾಧಿಸಲು ಯುವ ಜನತೆ ಮುಂದಾಗಲಿ.
ನ.23 ಹಾಗೂ 24ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕೈಗಾರಿಕಾ ಸಮಾವೇಶದಲ್ಲಿ ಈ ಭಾಗದವರು ಸ್ಪರ್ಧಿಸಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು. ಸಣ್ಣದಾದರೂ ಪರವಾಗಿಲ್ಲ ಸ್ವಂತ ಕೈಗಾರಿಕೆ ನಡೆಸುವ ಕೌಶಲಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಯುವ ಕೈಗಾರಿಕೋದ್ಯಮಿಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರ 2014ರ ಕೈಗಾರಿಕಾ ನೀತಿಯಲ್ಲಿ ಮಾರ್ಚ್ 2019ರ ವೇಳೆಗೆ 15 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವ ಗುರಿ ಹೊಂದಿತ್ತು. ಅದರಂತೆ ಅವಧಿಗೆ ಮುನ್ನ ಮಾರ್ಚ್-2017ರ ಅಂತ್ಯಕ್ಕೆ ರಾಜ್ಯದಲ್ಲಿ 14 ಲಕ್ಷ ಉದ್ಯೋಗಗಳನ್ನು ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ವಲಯಗಳಲ್ಲಿ ಸೃಷ್ಟಿಸಲಾಗಿದೆ. 5.75 ಲಕ್ಷ ಉದ್ಯೋಗಗಳು ಇನ್ನು ಎರಡು ವರ್ಷದಲ್ಲಿ ಸೃಷ್ಟಿಯಾಗಲಿವೆ.
ಕೇಂದ್ರ ಸರ್ಕಾರ ಸ್ಟಾರ್ಟ ಅಪ್ ಯೋಜನೆಯನ್ನು ಜಾರಿಗೊಳಿಸುವ ಮುಂಚೆಯೇ ಕರ್ನಾಟಕ ಯೋಜನೆಯನ್ನು ಅಳವಡಿಸಿಕೊಂಡು ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿರುವ ಎನ್ .ಟಿ.ಟಿ.ಎಫ್ ವಿದ್ಯಾರ್ಥಿಗಳು ಕುಡಿಯುವ ನೀರಿನ ಸಮಸ್ಯೆ ಹಾಗೂ ಬಸ್ ಕೊರತೆ ಸಚಿವರ ಗಮನಕ್ಕೆ ತಂದರು.
ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿಧೇìಶಕ ಡಿ.ವಿ ಪ್ರಸಾದ್, ಮಹಾನಗರ ಪಾಳಿಕೆ ಸದಸ್ಯ ದೀಪಕ್ ಚಿಂಚೋರೆ, ಹು-ಧಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ .ವಿ. ಮಾಡಳ್ಳಿ, ಬೇಲೂರು ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಕಡ್ಲಿ, ಕೆಐಡಿಬಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್ .ಜಯರಾಮ್, ಅಭಿವೃದ್ಧಿ ಅಧಿಕಾರಿ ಸತ್ಯನಾರಾಯಣ ಪವಾರ, ಉಪನಿರ್ದೇಶಕ ಟಿ.ಬಿ. ಸತೀಶ ಇದ್ದರು.