Advertisement

ಕಾರ್ಮಿಕರಿಗೆ ಭರ್ಜರಿ ಭತ್ತೆ : ಕಲ್ಯಾಣ ಯೋಜನೆಗಳ ಧನಸಹಾಯ ಪರಿಷ್ಕರಣೆ

12:45 AM Jun 28, 2021 | Team Udayavani |

ಬೆಂಗಳೂರು : ಕಾರ್ಮಿಕರ ಕಲ್ಯಾಣ ಯೋಜನೆಯ ಸೌಲಭ್ಯಗಳ ಧನಸಹಾಯ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ಇದೇ ಮೊದಲ ಬಾರಿಗೆ ಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಹೆರಿಗೆ ಸಂದರ್ಭ ತಲಾ 10 ಸಾವಿರ ರೂ. ಭತ್ತೆ ಘೋಷಿಸಲಾಗಿದೆ.

Advertisement

ಕಲ್ಯಾಣ ಯೋಜನೆಗಳ ಧನ ಸಹಾಯ ಮೊತ್ತವನ್ನು ಪರಿಷ್ಕರಿಸಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ಯಾಗಿತ್ತು. ಇತ್ತೀಚೆಗೆ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಮಿಕ ಕಲ್ಯಾಣ ಮಂಡಳಿಯ ಸಭೆಯಲ್ಲಿ ಧನಸಹಾಯದ ಮೊತ್ತವನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ.

ಸಂಘಟಿತ ವಲಯದ ನೋಂದಾಯಿತ ಕಾರ್ಮಿಕರಿಗೆ ಏಳು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇವುಗಳಲ್ಲಿ ಶೈಕ್ಷಣಿಕ ಪ್ರೋತ್ಸಾಹಧನ, ವೈದ್ಯಕೀಯ ನೆರವು, ಅಪಘಾತ ಸಹಾಯಧನ, ಅಂತ್ಯಸಂಸ್ಕಾರಕ್ಕೆ ನೆರವು, ವಾರ್ಷಿಕ ವೈದ್ಯಕೀಯ ತಪಾಸಣೆ, ವಾರ್ಷಿಕ ಕ್ರೀಡಾಕೂಟ ಆಯೋಜನೆಗೆ ಸಹಾಯಧನ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮಹಿಳಾ ಕಾರ್ಮಿಕರ ಮೊದಲ ಎರಡು ಹೆರಿಗೆಗೆ ತಲಾ 10 ಸಾವಿರ ರೂ. ಭತ್ತೆ ಘೋಷಿಸಲಾಗಿದೆ. ಇದರಿಂದ ಸಂಘಟಿತ ವಲಯದ 41 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಪರಿಷ್ಕರಿಸಿದ ಮೊತ್ತ ಮತ್ತು ಹೊಸ ಯೋಜನೆಗಳ ವೆಚ್ಚವನ್ನು ಮಂಡಳಿಯಲ್ಲಿ ಕಾರ್ಮಿಕರಿಂದ ಮತ್ತು ಉದ್ಯೋಗದಾತ ಸಂಸ್ಥೆ, ಕಾರ್ಖಾನೆ ಮಾಲಕರಿಂದ 20:40 ಅನುಪಾತದಲ್ಲಿ ಸ್ವೀಕರಿಸುವ ವಂತಿಗೆ ಮೊತ್ತದಿಂದ ಭರಿಸಲಾಗುತ್ತದೆ. ಈ ಪರಿಷ್ಕೃತ ಸೌಲಭ್ಯ 2021ರ ಜೂ. 22ರಿಂದ ಅನ್ವಯವಾಗಲಿದೆ ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆದಾಯ ಮಿತಿ ಪರಿಷ್ಕರಣೆ
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಯೋಜನೆಯಡಿ 8ರಿಂದ 10ನೇ ತರಗತಿಯ ವರೆಗಿನ ಮಕ್ಕಳಿಗೆ ವಾರ್ಷಿಕ 3 ಸಾವಿರ ರೂ., ಪಿಯುಸಿ, ಡಿಪ್ಲೊಮಾ, ಐಟಿಐ ಇತ್ಯಾದಿ ಕೋರ್ಸ್‌ಗಳಿಗೆ 4 ಸಾವಿರ ರೂ., ಪದವಿ ತರಗತಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗೆ ತಲಾ 5 ಸಾವಿರ ರೂ., ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇದು ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಸಿಗಲಿದೆ. ಈ ಸೌಲಭ್ಯ ಪಡೆಯಲು ಮೊದಲು ಮಾಸಿಕ ಆದಾಯ ಮಿತಿ 15 ಸಾವಿರ ರೂ. ಇತ್ತು. ಈಗ ಅದನ್ನು 21 ಸಾವಿರ ರೂ.ಗಳಿಗೆ ಏರಿಸಲಾಗಿದೆ.

Advertisement

ವೈದ್ಯಕೀಯ ನೆರವು ಹೆಚ್ಚಳ
ಗಂಭೀರ ಸ್ವರೂಪದ ಕಾಯಿಲೆಗಳ ಚಿಕಿತ್ಸೆಗೆ ನೀಡಲಾಗುತ್ತಿದ್ದ 10 ಸಾವಿರ ರೂ. ಸಹಾಯ ಧನವನ್ನು 25 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. 3 ಸಾವಿರ ರೂ. ಇದ್ದ ಅಪಘಾತ ಸಹಾಯಧನ 10 ಸಾವಿರ ರೂ.ಗಳಿಗೆ, 5 ಸಾವಿರ ರೂ. ಇದ್ದ ಅಂತ್ಯಸಂಸ್ಕಾರ ಸಹಾಯಧನ 10 ಸಾವಿರ ರೂ.ಗಳಿಗೆ, ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರ ನಡೆಸುವ ಕಾರ್ಮಿಕ ಸಂಘಟನೆಗಳಿಗೆ ನೀಡಲಾಗುತ್ತಿದ್ದ 30 ಸಾವಿರ ರೂ. ಧನಸಹಾಯ ವನ್ನು 1 ಲಕ್ಷ ರೂ.ಗಳಿಗೆ, ವಾರ್ಷಿಕ ಕ್ರೀಡಾ ಕೂಟಕ್ಕೆ ನೀಡಲಾಗುತ್ತಿದ್ದ 50 ಸಾವಿರ ರೂ.ಗಳನ್ನು 1 ಲಕ್ಷ ರೂ.ಗಳಿಗೆ ಪರಿಷ್ಕರಿಸಲಾಗಿದೆ.

ಸಂಘಟಿತ ನೌಕರರು ಯಾರು?
ಗಾರ್ಮೆಂಟ್ಸ್‌, ಹೊಟೇಲ್‌, ಕುಕ್ಕುಟೋದ್ಯಮ ಸಹಿತ 70ಕ್ಕೂ ಹೆಚ್ಚು ಅಧಿಸೂಚಿತ (ಶೆಡ್ನೂಲ್ಡ್‌) ಉದ್ಯೋಗಗಳ ಪಟ್ಟಿಯಲ್ಲಿ ಸೇವಾ ಮತ್ತು ಉತ್ಪಾದನ ವಲಯದ ವ್ಯಾಪ್ತಿಗೆ ಬರುವ ಕಾರ್ಖಾನೆ, ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದು, ಮಾಸಿಕ ಕನಿಷ್ಠ ವೇತನ ಪಡೆಯುವ, ಇಎಸ್‌ಐ, ಪಿಎಫ್, ಬೋನಸ್‌ ಸೌಲಭ್ಯ ಇರುವ, ಕಡ್ಡಾಯ ವಾರದ ರಜೆ, ಹೆಚ್ಚುವರಿ ಕೆಲಸ (ಒಟಿ) ಮಾಡಿದರೆ ಅದಕ್ಕೆ ವೇತನ ಪಡೆಯುವ, ವ್ಯತ್ಯಸ್ಥ ತುಟ್ಟಿ ಭತ್ತೆ (ವಿಡಿಎ) ಪಡೆಯುವ ಕಾರ್ಮಿಕರನ್ನು ಸಂಘಟಿತ ವಲಯದ ಕಾರ್ಮಿಕರೆಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next