ಕಲಬುರಗಿ: ಕೆರೆ ಹೂಳೆತ್ತುವುದರ ಜತೆಗೆ ಕೃಷಿ ಹೊಂಡ ಹಾಗೂ ಹೊಲಗಳಲ್ಲಿ ಬದುವಿನ ನಿರ್ಮಾಣ ಕಾರ್ಯಕ್ಕೂ ಒತ್ತು ನೀಡುವಂತೆ ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಫಜಲಪುರ ತಾಲೂಕಿನ ಗೊಬ್ಬುರ ಕೆ. ಗ್ರಾಮದ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಕೆರೆ ಹೂಳೆತ್ತುವುದನ್ನು ವೈಜ್ಞಾನಿಕವಾಗಿ ಕೈಗೊಳ್ಳಿ. ದಡದಲ್ಲಿ ಯಾವುದೇ ಮೂಲೆಯಲ್ಲಿ ಕೈಗೊಳ್ಳದೇ ಹೂಳು ತುಂಬಿರುವ ಕಟ್ಟೆಯಡಿ ಕಾಮಗಾರಿ ಕೈಗೊಳ್ಳಿ ಎಂದರು.
ಕೃಷಿ ಹೊಂಡ ಹಾಗೂ ಹೊಲಗಳಲ್ಲಿ ಬದುಗಳ ನಿರ್ಮಾಣ, ಕೆರೆಯ ಕಾಲುವೆಗಳ ಹೂಳೆತ್ತುವ ಕಾಮಗಾರಿ ಕೈಗೊಂಡಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗುವುದರಿಂದ ಈ ಕಾಮಗಾರಿಗಳತ್ತ ಹೆಚ್ಚಿನ ಲಕ್ಷ್ಯ ವಹಿಸಿ. ಮುಖ್ಯವಾಗಿ ಕಾಮಗಾರಿ ಕಣ್ಣಿಗೆ ಕಾಣುವಂತಿರಲಿ. ಹೆಸರಿಗಷ್ಟೇ ಬೇಡ ಎಂದು ತಾಕೀತು ಮಾಡಿದರು.
ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಶಂಕರ ಕಣ್ಣಿ ಮಾತನಾಡಿ, ಅಫಜಲಪುರ ತಾಲೂಕಿನಲ್ಲಿ ಈಗಾಗಲೇ 70 ಸಾವಿರ ಮಾನವ ದಿನಗಳು ಸೃಷ್ಟಿಯಾಗಿದೆ. ಗೊಬ್ಬುರ ಕೆ., ಬಿದನೂರ, ಭೈರಾಮಡಗಿ ಸೇರಿದಂತೆ ಇತರ ಗ್ರಾಮಗಳಲ್ಲಿನ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇತರ ಕಾಮಗಾರಿಗಳತ್ತ ಗಮನಹರಿಸಲಾಗುವುದು ಎಂದರು.
ಮುಖಂಡರಾದ ಸಿದ್ಧು ಸಿರಸಗಿ, ಬಿದನೂರ ಪಿಡಿಒ ಲಕ್ಷ್ಮೀ ಅಷ್ಠಗಿ ಮುಂತಾದವರಿದ್ದರು.