Advertisement

ಎನ್‌ಇಪಿನಲ್ಲಿ ಕೌಶಲ, ಜ್ಞಾನ ಸಂಪಾದನೆಗೆ ಒತ್ತು; ಸಚಿವ ಬಿ.ಸಿ.ನಾಗೇಶ್‌

05:22 PM May 25, 2022 | Team Udayavani |

ಮೈಸೂರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಲು ರೋಬೋಟಿಕ್ಸ್‌ ಲ್ಯಾಬ್‌ ಪೂರಕವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು. ಸಿದ್ಧಾರ್ಥ ನಗರದಲ್ಲಿರುವ ಶಾಂತಲ ವಿದ್ಯಾಪೀಠ ಶಾಲೆಯಲ್ಲಿ ರೋಬೋಟಿಕ್ಸ್‌ ಲ್ಯಾಬ್‌ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷ್‌ ಸರ್ಕಾರ ಸೃಷ್ಟಿಸಿದ ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ವೈಜ್ಞಾನಿಕ ಶಿಕ್ಷಣಕ್ಕೆ ಅವಕಾಶವೇ ಇರಲಿಲ್ಲ. ಇದುವೇ ಅವರ ಮೂಲ ಉದ್ದೇಶವೂ ಆಗಿತ್ತು. ಬ್ರಿಟಿಷರಿಗೆ ತಮ್ಮ ಸರ್ಕಾರಕ್ಕೆ ಬೇಕಾದ
ಗುಮಾಸ್ತರನ್ನು ಮಾತ್ರ ತಯಾರು ಮಾಡುವ ಶೈಕ್ಷಣಿಕ ವ್ಯವಸ್ಥೆಯನ್ನಷ್ಟೇ ಪೋಷಿಸಿದರು ಎಂದು ಹೇಳಿದರು.

Advertisement

ಪ್ರಶ್ನೆ ಕೇಳಿ ಉತ್ತರ ಪಡೆಯಲು ಉತ್ತೇಜನ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಮಕ್ಕಳ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ಮುಂದಾಗಿದ್ದು, ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿದೆ ಎಂದು ವಿವರಿಸಿ, ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ, ಜ್ಞಾನ ಸಂಪಾದನೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿ ಪ್ರಶ್ನೆ ಕೇಳಿ ಉತ್ತರ ಪಡೆಯುವಂತೆ ಉತ್ತೇಜಿಸಲಾಗುತ್ತಿದೆ ಎಂದು ವಿವರಿಸಿದರು.

ಶಿಕ್ಷಕರ ಸದಾ ಗೌರವ: ಬಿಜೆಪಿ ಅಧಿಕಾರ ಬಂದಾಗಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗುವ ಮುನ್ನ ಸರ್ಕಾರಿ ಶಾಲೆಗಳ ಸ್ಥಿತಿ ಹೇಗೆ ಇತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಸರ್ವಶಿಕ್ಷಣ ಅಭಿಯಾನ ಪ್ರಾರಂಭಿಸಿ ಶಾಲೆಗಳ ಸುಧಾರಣೆಗೆ ಕ್ರಮ ವಹಿಸಲಾಯಿತು. ಹೀಗೆ ಬಿಜೆಪಿ ಶಿಕ್ಷಣ ಮತ್ತು ಶಿಕ್ಷಕರಿಗೆ ಸದಾ ಗೌರವ ನೀಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ಎಸ್‌.ಎ. ರಾಮದಾಸ್‌, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ. ವಿ.ರವಿಶಂಕರ್‌, ಪಾಲಿಕೆ ಸದಸ್ಯರಾದ ರೂಪಾ, ಕಾರ್ಯದರ್ಶಿ, ಶಾಂತಲಾ ವಿದ್ಯಾಪೀಠದ ಅಧ್ಯಕ್ಷೆ ಶಾಂತಲಾ, ಕಾರ್ಯದರ್ಶಿ ಎಂ.ಎಸ್‌.ಸಂತೋಷ್‌ ಕುಮಾರ್‌, ನಾವೀನ್ಯ ಶಾಲೆಯ ಅಧ್ಯಕ್ಷ ಆರ್‌.ರಘು ಇನ್ನಿತರರು ಪಾಲ್ಗೊಂಡಿದ್ದರು.

ಜಪಾನ್‌ನಿಂದ ತಂದ ರೋಬೋಟ್‌ನ ವೈಶಿಷ್ಟ್ಯಗಳು
ಜಪಾನ್‌ನಿಂದ ತರಿಸಿರುವ ರೋಬೋಟ್‌ಗಳು ಬೋಧನೆಗೆ ನೆರವಾಗಲಿದ್ದು, ರೋಬೋಟಿಕ್ಸ್‌ ಲ್ಯಾಬ್‌ಗಾಗಿ 14 ಲಕ್ಷ ರೂ. ವಿನಿಯೋಗಿಸಲಾಗಿದೆ. ರೋಬೋಟ್‌ ಪಾಠ ಮಾಡುವಾಗ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಶಿಕ್ಷಕರೊಬ್ಬರನ್ನು ನಿಯೋಜಿಸಲಾಗುತ್ತಿದೆ. ಹೀಗಾಗಿ, ಪ್ರತಿ ವಿದ್ಯಾರ್ಥಿ ಪ್ರಾಜೆಕ್ಟ್‌ನಲ್ಲಿ ಭಾಗವಹಿಸುವ ಮೂಲಕ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

Advertisement

ರೋಬೋಟ್‌ ಮುಖದಲ್ಲಿ ಅಳವಡಿಸಿರುವ 8×6 ಸೆಂ.ಮೀ. ಅಳತೆಯ ಟಚ್‌ ಸ್ಕ್ರೀನ್‌ ಮಾನಿಟರ್‌ನಲ್ಲಿ ಮೂಡಿಬರುವ ಚಿತ್ರಗಳು, ಮುಖಭಾವವನ್ನು ತೋರಿಸುವುದಲ್ಲದೆ ಮಾತು, ಹಾಡಿಗೆ ತಕ್ಕಂತೆ ಕೈಗಳನ್ನು ಚಲಿಸುವುದರಿಂದ ಶಿಕ್ಷಕರೇ ನಮ್ಮ ಮುಂದೆ ನಿಂತು ಮಾತನಾಡುತ್ತಿದ್ದಾರೆ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸುತ್ತದೆ.ಅಲ್ಲದೆ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೂ ಪ್ರತ್ಯುತ್ತರ ನೀಡುವ ಈ ಎಜುಕೇಷನ್‌ ರೋಬೋಟ್‌ ಗಮನ ಸೆಳೆಯುತ್ತಿದೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳ ಜತೆಗೆ, ಹಿಂದುಳಿದ ವಿದ್ಯಾರ್ಥಿಗಳಿಗೂ ಈ ರೋಬೋಟ್‌ ಪಾಠ ಅವರ ಕೌಶಲ, ಕಲಿಕಾ ಮಟ್ಟವನ್ನು ಹೆಚ್ಚಿಸಲು ನೆರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next