ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಲವು ಪ್ರದೇಶಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಿದ್ದು ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ತಲೆದೊರಿದೆ. ಈಗಗಾಲೇ ಆನೇಕಲ್ ತಾಲೂಕಿನ ಚಂದಾಪುರ, ಅತ್ತಿಬೆಲೆ, ಬೊಮ್ಮಸಂದ್ರ, ಜಿಗಣಿ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಕಸ ವಿಲೇರಿವಾರಿ ಸಮಸ್ಯೆ ಎದುರಾಗಿದೆ. ಜಾಗದ ಕೊರತೆಯೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೃಷ್ಣರಾ ಜಪುರದ ದೊಡ್ಡಬನಹಳ್ಳಿಯಲ್ಲಿ ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ.
ಘನ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಪಂ ಕೃಷ್ಣರಾಜಪುರ ವ್ಯಾಪ್ತಿಯ ಕೆಲವು ಗ್ರಾಮ ಪಂಚಾಯ್ತಿ ಅಧ್ಯ ಕ್ಷರಿಗೆ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಲಿಕಾ ಪ್ರವಾಸ ಏರ್ಪಡಿಸಿದೆ. ಶೀಘ್ರದಲ್ಲೆ ಕೊಪ್ಪಳ ಜಿಲ್ಲೆಯ ಹುಲಿಗಿಯಲ್ಲಿ ಸ್ಥಾಪಿಸಲಾಗಿರುವ ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ತಂಡ ಭೇಟಿ ನೀಡಿ ಅಲ್ಲಿನ “ಬಹುಗ್ರಾಮ ಘನ ತ್ಯಾಜ್ಯ ನಿರ್ವಹಣಾ ಘಟಕ’ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ.
ಘಟಕಕ್ಕೆ 2 ಎಕರೆ ಭೂಮಿ: ನಗರ ಜಿಲ್ಲಾಡಳಿತ ಈಗಾಗಲೇ ಕಸ ವಿಲೇವಾರಿ ಸಂಬಂಧ ಜಾಗ ಗುರುತಿಸುವ ಕಾರ್ಯದಲ್ಲಿ ನಿರತಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳ ಸಭೆ ಕರೆದು ಭೂಮಿ ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ. ಈಗಾಗಲೇ ಸರ್ಕಾರ ಘನ ತ್ಯಾಜ್ಯ ವಿಲೇವಾ ರಿ ಗಾಗಿ ಕೃಷ್ಣರಾಜಪುರದ ದೊಡ್ಡಬನಹಳ್ಳಿಯಲ್ಲಿ ಎರಡು ಎಕರೆ ಜಾಗವನ್ನು ಜಿಲ್ಲಾಡಳಿತಕ್ಕೆ ನೀಡಿದೆ.
ಆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಕೆ.ಆರ್.ಪುರ ಸಮೀಪದ ದೊಡ್ಡಬನಹಳ್ಳಿಯಲ್ಲಿ ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲಿದೆ ಎಂದು ನಗರ ಜಿಲ್ಲೆಯ ಸ್ವತ್ಛ ಭಾರತ ಮಿಷನ್‌ನ (ಗ್ರಾಮೀಣ) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣರಾಜಪುರ ತಾಲೂಕು ವ್ಯಾಪ್ತಿಯ ನಾಲ್ಕು ಗ್ರಾ.ಪಂ.ಗಳ ಅಧ್ಯಕ್ಷರು ಮತ್ತು ಅಧಿಕಾರಿಗಳು ಕೊಪ್ಪಳ ಜಿಲ್ಲೆಯ ಹುಲಿಗಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಜಾಗದ ಕೊರತೆ: ಸ್ವತ್ಛ ಭಾರತ ಮಿಷನ್ ಸಡಿ ಜಿಲ್ಲಾಡಳಿತ ಹಲವು ಯೋಜನೆ ಜಾರಿಗೊಳಿಸುವ ಆಲೋಚನೆಯಲ್ಲಿದೆ. ಆದರೆ ಇದಕ್ಕೆ ಭೂಮಿ ಕೊರೆತೆ ಕಾಡುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 96 ಗ್ರಾ.ಪಂ.ಗಳಿದ್ದು ಹಲವೆಡೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ಗಂಭೀ ರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಈ ಹಿಂದೆ ವೈಜ್ಞಾನಿಕ ಕಸ ವಿಲೇವಾರಿ ಸಂಬಂಧ ಜಾಗ ಗುರುತಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಸರ್ಕಾರ, ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ, ದೊಡ್ಡ ಜಾಲ, ಚಿಕ್ಕಜಾಲ, ಸಿಂಗನಾಯಕನ ಹಳ್ಳಿ ಭೂಮಿ ಮಂಜೂರು ಮಾಡಿತ್ತು. ಆದರೆ ಇನ್ನೂ 90 ಗ್ರಾ.ಪಂ.ಗಳಲ್ಲಿ ಕಸ ವಿಲೇವಾರಿಗೆ ಜಾಗದ ಸಮಸ್ಯೆ ಇದೆ.
ಕೆ.ಆರ್.ಪುರದ ದೊಡ್ಡಬನಹಳ್ಳಿಯಲ್ಲಿ ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವ ಆಲೋಚನೆಯಿದೆ. ಆ ಹಿನ್ನೆಲೆಯ ಜಿಲ್ಲಾಡಳಿತದ ತಂಡ ಶೀಘ್ರದಲ್ಲೆ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮಕ್ಕೆ ಭೇಟಿ ನೀಡಲಿದೆ.
-ಜಗದೀಶ್ ಕೆ.ಜಿ, ಸಹಾಯಕ ಯೋಜನಾಧಿಕಾರಿ
ಕಸ ವಿಲೇವಾರಿ ಸಂಬಂಧಿಸಿದಂತೆ ಜಾಗದ ಸಮಸ್ಯೆ ಎದುರಾಗಿದೆ. ಖಾಲಿ ಜಾಗವನ್ನು ಗುರುತಿಸುವ ಕಾರ್ಯ ಈಗಾಗಲೇ ಸಾಗಿದೆ.
-ಕೆ.ಶಿವರಾಮೇಗೌಡ, ಬೆಂ.ನಗರ ಜಿಪಂ ಸಿಇಒ
* ದೇವೇಶ ಸೂರಗುಪ್ಪ