ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಸೇರಿ ಸಾಕಷ್ಟು ಮೂಲಸೌಕರ್ಯ ನಷ್ಟಗೊಂಡಿದ್ದು ಅವುಗಳ ಪುನರ್ ನಿರ್ಮಾಣದ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಗಷ್ಟೇ ಸಚಿವನಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದೇನೆ. ಬುಧವಾರ ಅಧಿಕಾರಿಗಳ ಸಭೆ ಕರೆದಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ನಷ್ಟದ ಬಗ್ಗೆ ಮಾಹಿತಿ ಪಡೆದು ಅದರ ಪುನರ್ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ನೆರವು ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದೇನೆ. ಅಗತ್ಯವಾದರೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ವಿಶೇಷ ಅನುದಾನ ಪಡೆಯಲಾಗುವುದು ಎಂದರು.
ಉತ್ತರ ಕರ್ನಾಟಕ ಅದರಲ್ಲೂ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಲ್ಲಿ ನೆರೆಯಿಂದ ದೊಡ್ಡ ಪ್ರಮಾಣದ ನಷ್ಟವೇ ಆಗಿದೆ. ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಿ ಲಕ್ಷಾಂತರ ಜನರು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಸಾವು-ನೋವು, ಆಸ್ತಿ-ಪಾಸ್ತಿ ನಷ್ಟವೂ ಹೆಚ್ಚಾಗಿಯೇ ಆಗಿದೆ. ಅವರ ಸಮಸ್ಯೆಗೆ ಸ್ಪಂದಿಸುವುದು ಮೊದಲ ಗುರಿ ಎಂದು ತಿಳಿಸಿದರು.
ಸುಧಾರಣೆಗೆ ಒತ್ತು: ಸಮಾಜ ಕಲ್ಯಾಣ ಇಲಾಖೆ ಸಮಗ್ರ ಸುಧಾರಣೆಗೆ ಒತ್ತು ನೀಡಲಾಗುವುದು. ಇಲಾಖೆ ಕೇವಲ ಬಡವರ ಮಕ್ಕಳಿಗೆ ಹಾಸ್ಟೆಲ್‌ನಲ್ಲಿ ಊಟ ಕೊಡುವುದಕ್ಕೆ ಸೀಮಿತವಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಕೆಲಸವೂ ಆಗಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃತಜ್ಞತೆ: ನಾನು ಉಪ ಮುಖ್ಯಮಂತ್ರಿಯಾಗಿದ್ದಕ್ಕೆ ಸಂತಸವಾಗಿದೆ. ನನ್ನನ್ನು 25 ವರ್ಷ ಬೆಳೆಸಿದ ಮುಧೋಳ ಜನತೆಗೆ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕಾರಜೋಳ ಹೇಳಿದರು.