Advertisement

KSRTC ಡಿಸೆಂಬರ್‌ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಒತ್ತು : ಬಸ್‌ ಹೊಂದಿಸುವ ಕಸರತ್ತು

11:55 PM Dec 01, 2023 | Team Udayavani |

ಉಡುಪಿ: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಯೋಜನೆಯನ್ನು ಶಾಲೆಗಳಲ್ಲಿ ಸರಿಯಾಗಿ ಮಾಡದೇ ಇರುವುದರಿಂದ ಡಿಸೆಂಬರ್‌ನಲ್ಲಿ ಏಕಾಏಕಿ ರಶ್‌ ಎದುರಾಗುವ ಸಾಧ್ಯತೆಯಿದೆ.
ಜನವರಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡ ಬೇಕಿರುವುದರಿಂದ ಶೈಕ್ಷಣಿಕ ಹಿತದೃಷ್ಟಿಯಿಂದ ಡಿಸೆಂಬರ್‌ ಅಂತ್ಯ ದೊಳಗೆ ಶೈಕ್ಷಣಿಕ ಪ್ರವಾಸ ಪೂರ್ಣ ಗೊಳಸಬೇಕು ಎಂಬ ಸೂಚನೆಯಿದೆ.

Advertisement

ಹೀಗಾಗಿ ಬಹುತೇಕ ಶಾಲೆಗಳು ದಸರಾ ರಜೆಯ ಅನಂತರ (ಅಕ್ಟೋಬರ್‌, ನವೆಂಬರ್‌,ಡಿಸೆಂಬರ್‌) ಮೂರು ತಿಂಗಳ ಕಾಲಾವಕಾಶ ವಿದ್ದರೂ ಡಿಸೆಂಬರ್‌ನಲ್ಲೇ ಪ್ರವಾಸ ನಿಗದಿ ಮಾಡುತ್ತಿರುವುದರಿಂದ ಬಸ್‌ ಹೊಂದಿಸಿ ಕೊಳ್ಳುವುದು ಕಷ್ಟವಾಗುತ್ತಿದೆ.

ಸರಕಾರಿ ಶಾಲೆಯ ವಿದ್ಯಾರ್ಥಿ ಗಳನ್ನು ಕೆಎಸ್ಸಾರ್ಟಿಸಿ ಅಥವಾ ಶಾಲೆಯ ಅಧಿಕೃತ ವಾಹನದಲ್ಲಿ ಪಾಲಕ, ಪೋಷಕರ ಅನುಮತಿ ಪಡೆದೇ ಪ್ರವಾಸಕ್ಕೆ ಕರೆದುಕೊಂಡು ಹೋಗ ಬೇಕು ಎಂಬ ನಿಯಮವಿದೆ.

ವಿದ್ಯಾರ್ಥಿನಿಯರು ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಶಿಕ್ಷಕಿಯರು ಇರಬೇಕು. ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅವ್ಯವಸ್ಥೆಯಾಗದಂತೆ ನೋಡಿ ಕೊಳ್ಳುವ ಜವಾಬ್ದಾರಿಯೂ ಶಾಲಾ ಶಿಕ್ಷಕರ ಮೇಲಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವಾಸವನ್ನು ಇದೀಗ ಬಹುತೇಕ ಶಾಲೆಗಳು ಆರಂಭಿಸಿವೆ. ಪ್ರವಾಸವೂ ಪಿಕ್‌ನಿಕ್‌ ಆಗದೇ ಅಧ್ಯಯನಕ್ಕೆ ಪೂರಕವಾಗ ಬೇಕು ಎಂಬ ನಿರ್ದೇಶನವನ್ನು ಶಾಲಾಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯಿಂದ ನೀಡಲಾಗಿದೆ.

Advertisement

ಪ್ರಸ್ತಾವನೆ ಆಧಾರದಲ್ಲಿ ಅನುಮತಿ
ಈಗಾಗಲೇ ಶಿಕ್ಷಣ ಇಲಾಖೆಯ ಅನು ಮತಿಯಿಂದ ಉಭಯ ಜಿಲ್ಲೆಯ ಕೆಲವು ಸರಕಾರಿ ಶಾಲೆಗಳು ಶೈಕ್ಷಣಿಕ ಪ್ರವಾಸವನ್ನು ಸರಕಾರಿ ಬಸ್‌ಗಳಲ್ಲೇ ಮಾಡುತ್ತಿವೆ. ಸದ್ಯ ಸರಕಾರಿ ಬಸ್‌ ಕೊರತೆಯಾಗಿಲ್ಲ. ಏಕಕಾಲದಲ್ಲಿ ಹತ್ತಾರು ಶಾಲೆಗಳಿಂದ ಅರ್ಜಿ ಬಂದಾಗ ಬಸ್‌ ವ್ಯವಸ್ಥೆ ಕಷ್ಟವಾಗಲಿದೆ. ಶಕ್ತಿ ಯೋಜನೆಯ ಅನಂತರದಲ್ಲಿ ಎಲ್ಲ ರೂಟ್‌ನ ಬಸ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ನಿತ್ಯದ ನಿರ್ವಹಣೆ, ಸಂಗ್ರಹ, ದುರಸ್ತಿ ಸೇರಿದಂತೆ ಶೇ. 7.5ರಷ್ಟು ಬಸ್‌ ಹೆಚ್ಚುವರಿಯಾಗಿ ವಿಭಾಗದಲ್ಲಿ ಇರುತ್ತದೆ. 578 ವಾಹನವಿದ್ದು, ಇದರಲ್ಲಿ 513 ವಾಹವನ್ನು ನಿತ್ಯ ಆಪರೇಟ್‌ ಮಾಡಲಾಗುತ್ತಿದೆ. ಉಳಿದ 65 ವಾಹನದಲ್ಲಿ ರಿಪೇರಿ, ಒಪ್ಪಂದ ಮೇರೆಗೆ ಒದಗಿಸುವುದು ಇತ್ಯಾದಿ ವ್ಯವಸ್ಥೆಗೆ ಬಳಸಲಾಗುತ್ತದೆ.

2 ರೂ. ರಿಯಾಯಿತಿ
ಶಾಲಾ ಮಕ್ಕಳ ಪ್ರವಾಸಕ್ಕೆ ಹೋಗುವ ಸರಕಾರಿ ಬಸ್‌ ಶುಲ್ಕ ಸ್ವಲ್ಪ ಕಡಿಮೆ ಇರುತ್ತದೆ. ಸಾಮಾನ್ಯ ಸಾರಿಗೆ ವ್ಯವಸ್ಥೆಯಲ್ಲಿ ಒಂದು ಕಿ.ಮೀ.ಗೆ ಎಷ್ಟು ದರ ನಿಗದಿಯಾಗಿರುತ್ತದೆಯೋ ಅದಕ್ಕಿಂತ ಎರಡು ರೂ. ಕಡಿಮೆ ದರದಂತೆ ಬಸ್‌ ಸೇವೆ ನೀಡಲಾಗುತ್ತದೆ. ಅಲ್ಲದೆ ಸರಕಾರಿ ಬಸ್‌ಗಳಲ್ಲಿ ಸುರಕ್ಷೆಗೂ ಆದ್ಯತೆ ನೀಡಲಾಗುತ್ತದೆ.

ದುಬಾರಿ ಶುಲ್ಕ ವಸೂಲಿ ಮಾಡುವಂತಿಲ್ಲ
ಶಾಲಾ ಪ್ರವಾಸದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಶಾಲಾ ಶಿಕ್ಷಕರು ದುಬಾರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಪ್ರವಾಸಕ್ಕಾಗಿ ದುಬಾರಿ ಶುಲ್ಕ ವಸೂಲಿ ಮಾಡುವುದು ಕಂಡು ಬಂದಲ್ಲಿ/ ದೂರುಗಳು ಬಂದಲ್ಲಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ.

ಎಲ್ಲ ಶಾಲೆಗಳಿಂದಲೂ ಒಂದೆ ಸಮಯದಲ್ಲಿ ಪ್ರಸ್ತಾವನೆ ಬಂದಲ್ಲಿ ವಾಹನ ಹೊಂದಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಈಗ ಬಂದಿರುವ ಪ್ರಸ್ತಾವನೆ ಅನುಸಾರ ವಾಹನದ ವ್ಯವಸ್ಥೆ ಮಾಡುತ್ತಿದ್ದೇವೆ. ಡಿಸೆಂಬರ್‌ನಲ್ಲಿಯೇ ಅತಿ ಹೆಚ್ಚು ಶಾಲೆಗಳ ಶೈಕ್ಷಣಿಕ ಪ್ರವಾಸ ಇರುವುದರಿಂದ ಒಮ್ಮೆಲೇ ಅರ್ಜಿಗಳು ಬರುವ
ಸಾಧ್ಯತೆಯೂ ಇರುತ್ತದೆ.
– ರಾಜೇಶ್‌ ಶೆಟ್ಟಿ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ

ಕೆಲವೊಂದು ಶಾಲೆಗಳು ಶೈಕ್ಷಣಿಕ ಪ್ರವಾಸ ಯೋಜನೆ ಹಾಕಿಕೊಂಡಿವೆ. ಪರಿಶೀಲಿಸಿ, ಸುರಕ್ಷೆಗೆ ಆದ್ಯತೆ ನೀಡುವಂತೆ ಸೂಚಿಸಿ ಅನುಮತಿ ಕಲ್ಪಿಸುತ್ತಿದ್ದೇವೆ. ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡದಂತೆ ನಿರ್ದೇಶಿಸಲಾಗಿದೆ.
– ಕೆ. ಗಣಪತಿ, ಡಿಡಿಪಿಐ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next