Advertisement

ಎಮ್ಮೆಕೆರೆ ಅಂತಾರಾಷ್ಟ್ರೀ ಯ ಈಜುಕೊಳ; ಸಾರ್ವಜನಿಕರ ಬಳಕೆಗೆ ಶೀಘ್ರ ಮುಕ್ತ

06:13 PM Feb 26, 2024 | Team Udayavani |

ಮಹಾನಗರ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗಿ ನ. 24ರಂದು ಉದ್ಘಾಟನೆಗೊಂಡು ಆ ಬಳಿಕ ಬೀಗಮುದ್ರೆ ಜಡಿಯಲಾಗಿದ್ದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕೊಳದ ಬೀಗ ತೆರವುಗೊಳಿಸುವ ಸುಯೋಗ ಹತ್ತಿರವಾಗಿದೆ. ಹತ್ತು
ದಿನಗಳೊಳಗಾಗಿ ಈಜುಕೊಳ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.

Advertisement

ಈಜುಗಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಜುಕೊಳದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಜುಕೊಳದಲ್ಲಿ ಮೂಲಸೌಲಭ್ಯ ವ್ಯವಸ್ಥೆಯನ್ನು ಹೆಚ್ಚಿಸಲು ಹಾಗೂ ಸಮರ್ಪಕ ನಿರ್ವಹಣ ಕ್ರಮ ಕೈಗೊಳ್ಳಲು ದೇಶದ ಇತರ ಈಜುಕೊಳಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಅತ್ಯುತ್ತಮ ನಿರ್ವಹಣೆ ಹೊಂದಿರುವ ಈಜುಕೊಳದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.

ಪ್ರತಿ ವಿಭಾಗಗಳಲ್ಲಿ ಓರ್ವ ಕೋಚ್‌ ಹಾಗೂ ಲೈಫ್‌ ಗಾರ್ಡ್‌ ನೇಮಿಸಲಾಗುತ್ತದೆ. ಬೇಸಗೆ ರಜೆ ಹತ್ತಿರವಾಗುತ್ತಿದ್ದು, ಶಿಬಿರಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಕ್ರಮ ವಹಿಸಲಾಗಿದೆ. ಉಳಿದಂತೆ ಎಲ್ಲ ಮೂಲ ಸೌಕರ್ಯಗಳು ವ್ಯವಸ್ಥಿತವಾಗಿವೆ. ಈಗಾಗಲೇ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಕೆಲವು ವರ್ಷ ನಿರ್ವಹಣೆ ಮಾಡಬೇಕಿದೆ.ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈಜುಕೊಳ ಸಂಕೀರ್ಣವನ್ನು ಕಳೆದ ವರ್ಷ ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ ಉದ್ಘಾಟಿಸಿ ದ್ದರು. ಇದೇ ವೇಳೆ ಮೂರು ದಿನಗಳ ರಾಷ್ಟ್ರೀಯ ಮಾಸ್ಟರ್ ಈಜು ಸ್ಪರ್ಧೆಯೂ ಆಯೋಜನೆಗೊಂಡಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಂದ ಈಜುಕೊಳದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿತ್ತು. ಆದರೆ ಬಳಿಕ ಈಜುಕೊಳಕ್ಕೆ ಈ ವರೆಗೆ ಯಾರಿಗೂ ಪ್ರವೇಶ ಕಲ್ಪಿಸಿಲ್ಲ. ಯಾವುದೇ ಸ್ಪರ್ಧೆಗಳೂ ಆಯೋಜನೆಗೊಂಡಿಲ್ಲ.

24.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸುಮಾರು 2 ಎಕ್ರೆ ಜಾಗದಲ್ಲಿ 24.94 ಕೋ. ರೂ. ವೆಚ್ಚದಲ್ಲಿ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಸಿದ್ಧವಾಗಿದೆ. ಈಜುಕೊಳ ಸಂಕೀರ್ಣವು 50 ಮೀ. ಉದ್ದ,25 ಮೀ. ಅಗಲ, 2.2 ಮೀ. ನಿಂದ 1.4 ಮೀ. ವರೆಗಿನ ಆಳವನ್ನು ಹೊಂದಿದೆ.

Advertisement

ಕ್ರೀಡಾಪಟುಗಳಿಗೆ ತರಬೇತಿಗಾಗಿ 25 ಮೀ. ಉದ್ದ, 10 ಮೀ. ಅಗಲ ಮತ್ತು 2.2 ಮೀ. ಆಳದ ಅಭ್ಯಾಸ ಪೂಲ್‌ ಅನ್ನು ನಿರ್ಮಿಸಲಾಗಿದೆ. ಮಕ್ಕಳನ್ನು ತರಬೇತುಗೊಳಿಸಲು 13.8 ಮೀ. ಉದ್ದ, 10ಮೀ ಅಗಲ ಮತ್ತು 1.2 ಮೀ. ಆಳದ ಪುಟಾಣಿ ಈಜುಕೊಳವನ್ನು ನಿರ್ಮಿಸಲಾಗಿದೆ. ಈಜು ಕೊಳ ಸಂಕೀರ್ಣದಲ್ಲಿ ಸ್ಪರ್ಧಾಳು ಈಜುಪಟುಗಳಿಗೆ ವಸತಿ ನಿಲಯಗಳು, ಜಿಮ್ನಾಶಿಯಂ, ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು, ಲಾಕರ್‌ ಗಳು, ಆಡಳಿತ ಕಚೇರಿ, ಕ್ರೀಡಾ ಔಷಧ, ಚಿಕಿತ್ಸಾ ಕೊಠಡಿಗಳು, ಫಿಸಿಯೋಥೆರಪಿ ಕೇಂದ್ರ ಸಹಿತ ಅಗತ್ಯ ಸೌಲಭ್ಯ ಹೊಂದಿದೆ.

10 ದಿನಗಳೊಳಗೆ ಬಳಕೆ ಸಿದ್ಧ
ಹೊಸದಾಗಿ ನಿರ್ಮಾಣಗೊಂಡಿರುವ ಕೊಳದಲ್ಲಿ ಸಾರ್ವಜನಿಕರಿಗೆ ಯಾವ ರೀತಿ ವ್ಯವಸ್ಥೆ ಕಲ್ಪಿಸಬೇಕು. ಕೊಳದ ನಿರ್ವಹಣೆ, ಖರ್ಚು ವೆಚ್ಚಗಳು ಸಹಿತ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಈಜುಕೊಳದಲ್ಲಿ ಸಾರ್ವಜನಿಕರಿಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕೊಳಗಳ ಬಗ್ಗೆ ಅಧ್ಯಯನ ನಡೆಸಿ ಕ್ರಮ ವಹಿಸಲಾಗಿದೆ. 10 ದಿನಗಳೊಳಗೆ ಸಾರ್ವಜನಿಕರಿಗೆ ಈಜುಕೊಳ ತೆರೆದುಕೊಳ್ಳಲಿದೆ. ಅಂತಿಮ ತಯಾರಿಗಳು ಪೂರ್ಣಗೊಂಡಾಕ್ಷಣ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು.
-ಅರುಣ್‌ ಪ್ರಭ, ಸ್ಮಾರ್ಟ್‌ ಸಿಟಿ ಪ್ರಧಾನ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next