Advertisement

ನ್ಯೂಸ್‌ಕ್ಲಿಕ್‌ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿ, CJI ಗೆ ಗಣ್ಯರ ಪತ್ರ

10:45 PM Aug 11, 2023 | Team Udayavani |

ನವದೆಹಲಿ: ಭಾರತ ವಿರೋಧಿ ಅಜೆಂಡಾದೊಂದಿಗೆ ಚೀನಾಪರ ನಿಲುವನ್ನು ಪ್ರಚುರಪಡಿಸುತ್ತಿರುವ ಆರೋಪ ಎದುರಿಸುತ್ತಿರುವ ಆನ್‌ಲೈನ್‌ ಸುದ್ದಿ ಸಂಸ್ಥೆ “ನ್ಯೂಸ್‌ಕ್ಲಿಕ್‌’ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿಗಳು, ರಾಯಭಾರಿಗಳು ಸೇರಿದಂತೆ 250 ಮಂದಿ ಗಣ್ಯ ನಾಗರಿಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

Advertisement

ಚೀನಾದ ಆದೇಶದ ಮೇರೆಗೆ ಅಮೆರಿಕದ ಕೋಟ್ಯಧಿಪತಿ ನವಿಲ್ಲೆ ರಾಯ್‌ ಸಿಂಘಮ್‌ ಎಂಬುವರಿಂದ ನ್ಯೂಸ್‌ಕ್ಲಿಕ್‌ ಧನಸಹಾಯ ಪಡೆದು, ಭಾರತದ ವಿರುದ್ಧ ಸುದ್ದಿ ಬಿತ್ತರಿಸುತ್ತಿದೆ. ಅಲ್ಲದೇ, ದೇಶದ ವಿರುದ್ಧ ಪಿತೂರಿ ನಡೆಸುತ್ತಿರುವ ದ್ರೋಹಿಗಳನ್ನು ಕಾನೂನು ಪರಿಧಿಗೆ ತಂದು ನಿಲ್ಲಿಸಲು, ಇದರ ಹಿಂದಿನ ಸಂಪೂರ್ಣ ಜಾಲವನ್ನು ಬಹಿರಂಗಗೊಳಿಸಿ, ಈ ವಿಶ್ವಾಸಘಾತುಕ ನಡಾವಳಿಯನ್ನು ಹತ್ತಿಕ್ಕಲು ಈ ಪ್ರಕರಣ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಲು ಕೇಂದ್ರಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಕೋರಲಾಗಿದೆ.

ಜತೆಗೆ ರಫೇಲ್‌ ಒಪ್ಪಂದದ ಕುರಿತ ನ್ಯೂಸ್‌ಕ್ಲಿಕ್‌ ವರದಿ ಮತ್ತು ಅದೇ ವಿಚಾರ ವಿಪಕ್ಷಗಳ ಅಸ್ತ್ರವಾಗಿದ್ದು ಕಾಕತಾಳೀಯವಲ್ಲ, ಪೂರ್ವ ನಿಯೋಜಿತ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಮುಕ್ತ ಪತ್ರಿಕಾ ಸೋಗಿನಲ್ಲಿ ದೇಶದ ಪ್ರಜಾಪ್ರಭುತ್ವದಲ್ಲಿ ವಿದೇಶಗಳ ಆದೇಶದ ಮೇಲೆ ಹಸ್ತಕ್ಷೇಪ ಮಾಡುವ, ಜನರ ಹಾದಿ ತಪ್ಪಿಸುವ ಈ ಸಂಸ್ಥೆ ನಮ್ಮ ಪ್ರಜಾಪ್ರಭುತ್ವಕ್ಕೇ ಸವಾಲೆಸೆದಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್‌ ಮಾಲಿಕತ್ವದ ಪಿಪಿಕೆ ನ್ಯೂಸ್‌ಕ್ಲಿಕ್‌ ಸ್ಟುಡಿಯೊ ಪ್ರೈವೇಟ್‌ ಲಿಮಿಟೆಡ್‌ಗೆ ಮತ್ತು ಅದರ ನಿರ್ದೇಶಕರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next