ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹೆದ್ದಾರಿ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು,ಕಾಮಗಾರಿಯನ್ನು ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದುಕೊಡಿ ಎಂದು ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಅವರು ರಾ.ಹೆ. ಕಾಮಗಾರಿ ಗುತ್ತಿಗೆ ವಹಿಸಿರುವ ಕಂಪೆನಿ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಶನಿವಾರ ಲಾರಿ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಜೀವನ್ ಮೃತಪಟ್ಟಿದ್ದರೂ ಈ ಪ್ರಕರಣಕ್ಕೆ ಸಂಬಂಧಿಸಿ ನಡೆದ ರಸ್ತೆ ತಡೆ ಹಿನ್ನೆಲೆಯಲ್ಲಿ ಸಾರ್ವಜನಿಕ ಮುಖಂಡರು, ಪೊಲೀಸರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರತ ಅಧಿಕಾರಿಗಳ ಸಮ್ಮುಖದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರವಿವಾರ ತುರ್ತು ಸಭೆ ನಡೆಯಿತು.
ಕಾನೂನಿನಡಿ ಹೈವೇ ಪ್ಯಾಟ್ರಲಿಂಗ್ ವಾಹನ ಇರಬೇಕು. ಆದರೆ ನಂತೂರಿನಿಂದ ತಲಪಾಡಿವರೆಗೆ ಒಂದೂ ಪ್ಯಾಟ್ರಲಿಂಗ್ ಆಗಲಿ, ಆಂಬ್ಯುಲೆನ್ಸ್ ವ್ಯವಸ್ಥೆಯೂ ಕಂಪೆನಿ ನಿರ್ವಹಿಸುತ್ತಿಲ್ಲ. ಹೆದ್ದಾರಿ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ ನಡೆಯುತ್ತಿದೆ. ಈಗ ಸಭೆ ಕರೆದ ಬಳಿಕ ದುರಸ್ತಿ ಕಾರ್ಯ ನಡೆಸುತ್ತೇನೆ ಅನ್ನುವವರಿಗೆ ಮುಂಚಿತವಾಗಿ ದುರಸ್ತಿ ಕಾರ್ಯ ನಡೆಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಡಿಸಿಪಿ, ಶನಿವಾರದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ಸಿಬಂದಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.
ಭೂಸ್ವಾಧೀನ ವಿಳಂಬ
ಕಂಪೆನಿ ಎಂಜಿನಿಯರ್ ಹರೀಶ್ ಮಾತನಾಡಿ, 2010 ರಿಂದ ಫ್ಲೈಓವರ್ ಕಾಮಗಾರಿ ಆರಂಭಿಸಲಾಗಿದೆ. ಆರಂಭದಲ್ಲಿ ಭೂಸ್ವಾಧೀನ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಹಿನ್ನೆಡೆಯಾಯಿತು. ತದನಂತರ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಡಿಸೈನ್ ಬದಲಾಯಿತು. ಇದರಿಂದ ಇನ್ನಷ್ಟು ವಿಳಂಬವಾಯಿತು ಎಂದರು.
ಸಾಮಾಜಿಕ ಕಾರ್ಯಕರ್ತ ರಾಝಿಕ್ ಉಳ್ಳಾಲ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀರಾ ನಿರ್ಲಕ್ಷ್ಯದಿಂದ ನಡೆಯುತ್ತಿದೆ. ಸಾರ್ವಜನಿಕರ ತೊಂದರೆಗಳಿಗೆ ಸ್ಪಂದಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಕೋಟಿ ರೂ. ಪ್ರಾಜೆಕ್ಟನ್ನು ಕೇವಲ 14 ಕಾರ್ಮಿಕರು ನಿರ್ವಹಿಸುತ್ತಿರುವುದು ದುರದೃಷ್ಟಕರ. ಇಲ್ಲಿ ಹೆದ್ದಾರಿ ಅವ್ಯವಸ್ಥೆಯಿಂದ ಯುವಕರು ಜೀವಗಳನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಆದರೆ ಅತ್ತ ತಲಪಾಡಿಯಲ್ಲಿ ಸುಂಕ ವಸೂಲಿ ಕೇಂದ್ರದಲ್ಲಿ ರೌಡಿಗಳನ್ನು ನಿಲ್ಲಿಸಿ ಸುಂಕ ಸಂಗ್ರಹ ನಡೆಸಲಾಗುತ್ತಿದೆ. ಕಾಮಗಾರಿ ಮುಗಿಯದಿದ್ದರೂ ಸುಂಕ ವಸೂಲಿ ಮಾಡುತ್ತಿರುವುದರಲ್ಲಿ ನ್ಯಾಯಯುತವಲ್ಲ. ಎಲ್ಲಿಯೂ ಸೂಚನ ಫಲಕಗಳನ್ನು ಹಾಕಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಕಲ್ಲಾಪು ಖಾಸಗಿ ಸಭಾಂಗಣದ ಎದುರುಗಡೆ ಡಿವೈಡರ್ ಏರಿ ಹಲವು ವಾಹನಗಳು ಅಪಘಾತಕ್ಕೀಡಾಗುತ್ತಿದೆ. ತೊಕ್ಕೊಟ್ಟು ಜಂಕ್ಷನ್‌ನ ಅವ್ಯವಸ್ಥೆಯನ್ನು ಸೋಮವಾರ ಸಂಜೆಯೊಳಗೆ ದುರಸ್ತಿಗೊಳಿಸದೇ ಇದ್ದಲ್ಲಿ ಟೋಲ್ ಎದುರು ಕುಳಿತು ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ತುರ್ತು ಕಾಮಗಾರಿಗೆ ನಿರ್ದೇಶನ
ತೊಕ್ಕೊಟ್ಟಿನಲ್ಲಿ ಶನಿವಾರ ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ , ಎಸ್.ಐ ಹಾಗೂ
ಹೆದ್ದಾರಿ ಕಾಮಗಾರಿ ಅಧಿಕಾರಿಗಳ ಜತೆಗೆ ಭೇಟಿ ನೀಡಿದರು.
ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ತೆರಳುವ ಜಾಗದಲ್ಲಿ ತಾತ್ಕಾಲಿಕ ಮಾರ್ಗವನ್ನು ತೆರವುಗೊಳಿಸುವಂತೆ ಸೂಚಿಸಿದರು. ಬಸ್ ನಿಲ್ದಾಣ ಮತ್ತು ಹೆದ್ದಾರಿಯನ್ನು ಸಂಪರ್ಕಿಸುವ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಎಸ್.ಐ. ಗಳಲ್ಲಿ ಸೂಚಿಸಿದರು. ಚರಂಡಿ ಮುಚ್ಚಿ ರಸ್ತೆಯನ್ನು ಅಗಲೀಕರಣಗೊಳಿಸಿ ಸೋಮವಾರ ಸಂಜೆಯೊಳಗಡೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆದೇಶಿಸಿದರು. ಠಾಣಾಧಿಕಾರಿ ಗೋಪಿಕೃಷ್ಣ, ಪಶ್ಚಿಮ ಹಾಗೂ ಪೂ.ವಿಭಾಗ ಸಂಚಾರಿ ಠಾಣೆಯ ಎಸ್.ಐ.ಗಳಾದ ಸುರೇಶ್ ಕುಮಾರ್, ಮೋಹನ್ ಕೊಟ್ಟಾರಿ, ಪಜೀರು ಗ್ರಾ.ಪಂ. ಮಾಜಿ ಅಧ್ಯಕ್ಷ ನಝೀರ್ ಮೊದಿನ್, ರವೀಂದ್ರ ಇನೋಳಿ ಉಪಸ್ಥಿತರಿದ್ದರು.