ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಟ್ವೀಟರ್ ಅನ್ನು ಬರೋಬ್ಬರಿ 44 ಶತಕೋಟಿ ಡಾಲರ್ (3.62 ಲಕ್ಷ ಕೋಟಿ)ಗೆ ವಹಿವಾಟು ಕುದುರಿಸಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೊನೆಗೂ ಗುರುವಾರ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಟ್ವೀಟರ್ ಮಸ್ಕ್ ತೆಕ್ಕೆಗೆ ಬಿದ್ದಂತಾಗಿದೆ.
ಇದನ್ನೂ ಓದಿ:ಕಾಪು : ಟಯರ್ ಸ್ಫೋಟಗೊಂಡು ಮರದ ದಿಮ್ಮಿ ಸಾಗಾಟದ ಲಾರಿಗೆ ಬೆಂಕಿ, ತಪ್ಪಿದ ಭಾರೀ ಅವಘಡ
ಜಗತ್ತಿನ ನಂಬರ್ ವನ್ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವೀಟರ್ ಖರೀದಿಗಾಗಿ ಕಳೆದ ಆರು ತಿಂಗಳಿನಿಂದ ಕಾನೂನು ಜಟಾಪಟಿಯ ನಂತರ ಇದೀಗ ಅಂತಿಮವಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿ ವಿವರಿಸಿದೆ.
ಟ್ವೀಟರ್ ಖರೀದಿ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಎಲಾನ್ ಮಸ್ಕ್, ಭಾರತೀಯ ಮೂಲದ ಟ್ವೀಟರ್ ಸಿಇಒ ಪರಾಗ್ ಅಗರ್ವಾಲ್, ನೀತಿ ಮತ್ತು ಕಾನೂನು ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಹಗಾಲ್ ಸೇರಿದಂತೆ ಹಲವು ಉನ್ನತ ಎಕ್ಸಿಕ್ಯೂಟಿವ್ ಗಳನ್ನು ವಜಾಗೊಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇವರೆಲ್ಲರೂ ಟ್ವೀಟರ್ ನಲ್ಲಿರುವ ನಕಲಿ ಖಾತೆಗಳ ಬಗ್ಗೆ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ, ದಿಕ್ಕು ತಪ್ಪಿಸಿರುವುದಾಗಿ ಎಲಾನ್ ಮಸ್ಕ್ ಆರೋಪಿಸಿದ್ದಾರೆ. ಮಾನವೀಯತೆಗೆ ಹೆಚ್ಚು ಸಹಾಯ ಮಾಡುವ ನಿಟ್ಟಿನಲ್ಲಿ ಟ್ವೀಟರ್ ಖರೀದಿಸಿರುವುದಾಗಿ ಮಸ್ಕ್ ತಿಳಿಸಿದ್ದಾರೆ.
ಟ್ವೀಟರ್ ನ ಸ್ಯಾನ್ ಫ್ರಾನ್ಸಿಸ್ಕೋ ಕೇಂದ್ರ ಕಚೇರಿಯಲ್ಲಿ ಮಸ್ಕ್ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಪರಾಗ್ ಅಗರ್ ವಾಲ್ ಮತ್ತು ನೆಡ್ ಸೆಹಗಾಲ್ ಹಾಜರಿದ್ದರು ಎಂದು ವರದಿ ತಿಳಿಸಿದೆ.