ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಎಲಿವೇಟೆಡ್ ಟ್ರಾನ್ಸ್‌ಪೋರ್ಟ್ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡು ಒಂದು ಅಥಾರಿಟಿ ರಚಿಸಬೇಕು. ಬೆಂಗಳೂರಿನ ಸುತ್ತಮುತ್ತಲಿನ ಟ್ರಾಫಿಕ್ ಕಡಿಮೆ ಮಾಡಲು ಒಂದು ಅಥಾರಿಟಿ ನಿರ್ಮಾಣ ಮಾಡುತ್ತೇವೆ. ಒಂದೇ ಸಂಸ್ಥೆಯಡಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಬರುತ್ತದೆ ಎಂದರು.
ಒಂದೇ ಫ್ಲೈಓವರ್ ಪಿಲ್ಲರ್ ನ ಅಡಿಯಲ್ಲಿ ಮೆಟ್ರೋ, ರೈಲು ಮತ್ತು ರಸ್ತೆಯನ್ನು ಮಾಡಬೇಕು ಎಂಬ ಪ್ಲಾನ್ ಇದೆ. ಬೈಯಪ್ಪನಹಳ್ಳಿಯಲ್ಲಿ ಈ ರೀತಿ ಮಾಡಲು ರೈಲ್ವೆ ಇಲಾಖೆ ಯೋಜನೆ ತಯಾರಿಸುತ್ತದೆ. ಭೂಮಿಯ ಬಳಕೆ ಕಡಿಮೆ ಮಾಡಿಕೊಂಡು ಒಂದೆ ಜಾಗದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಮೂರು ಫ್ಲೋರ್ ಗಳಾಗಿ ಮಾಡಿಕೊಂಡು ಅದರ ಅಡಿಯಲ್ಲಿ ಸಾರಿಗೆ ಸಂಪರ್ಕ ಸಾಧಿಸಲು ಚಿಂತನೆಯಾಗಿದೆ. ಈ ಬಗ್ಗೆ ತಾಂತ್ರಿಕ ತಂಡದ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:1993ರ ಮುಂಬೈ ಸ್ಫೋಟ ಅಪರಾಧಿ ಯಾಕೂಬ್ ಸಮಾಧಿಗೆ ದೀಪಾಲಂಕಾರ; ಬಿಜೆಪಿ ಆಕ್ರೋಶ
ಎಲ್ಲೆಲ್ಲಿ ರಸ್ತೆ ಮಾಡಲು ಸಾಧ್ಯವಿರದಲ್ಲಿ ಎಲಿವೇಟೆಡ್ ಟ್ರಾನ್ಸ್‌ಪೋರ್ಟ್ ಮಾಡಲು ಚಿಂತನೆ ನಡೆಸಿದ್ದೇವೆ. ರೋಪ್ ವೇ ಮೂಲಕ ಸಂಚಾರಿಸುವ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಅದರ ತಂತ್ರಜ್ಞಾನವಿದೆ. ಅದನ್ನು ಬೆಂಗಳೂರಿಗೆ ಯಾವ ರೀತಿ ಬಳಸಿಕೊಳ್ಳಬಹುದೆಂದು ಚರ್ಚೆ ನಡೆಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.