Advertisement

ಎಲಿವೇಟೆಡ್‌ ರಸ್ತೆಗೆ ಮುಹೂರ್ತ

11:43 AM Nov 30, 2018 | Team Udayavani |

ಬೆಂಗಳೂರು: ನಗರದ ನಾಲ್ಕೂ ದಿಕ್ಕುಗಳಿಗೆ ಸಂಪರ್ಕ ಕಲ್ಪಿಸುವ 102 ಕಿ.ಮೀ ಉದ್ದದ 25,495 ಕೋಟಿ ರೂ. ವೆಚ್ಚದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ 2019ರ ಜನವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡುವ ಕುರಿತು ಬಿಡಿಎ, ಜಲಮಂಡಳಿ, ಮೆಟ್ರೊ, ಅರಣ್ಯ ಇಲಾಖೆ, ರೈಲ್ವೆ, ಪಿಡಬ್ಲ್ಯೂಡಿ ಹಾಗೂ ಪೊಲಿಸ್‌ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲಿವೇಟೆಡ್‌ ಕಾರಿಡಾರ್‌ ರಸ್ತೆಗೆ ಈಗಾಗಲೇ ಡಿಪಿಆರ್‌ ಸಿದ್ದಪಡಿಸಲಾಗಿದೆ.

ನಗರದ ವಾಹನ ದಟ್ಟಣೆ ನಿವಾರಿಸಲು ಪೂರ್ವ ಪಶ್ಚಿಮ ಹಾಗೂ ಉತ್ತರ-ದಕ್ಷಿಣ ದಿಕ್ಕುಗಳನ್ನು ಕೂಡಿಸುವ ಯೋಜನೆ ಇದಾಗಿದೆ. ಕೆಆರ್‌ಡಿಎಲ್‌ ಮೂಲಕ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, 2021 ಕ್ಕೆ ಯೋಜನೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಯೋಜನೆಗೆ 90 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಖಾಸಗಿ ಮಾಲೀಕರಿಂದ 17 ಎಕರೆ ಜಮೀನು ವಶಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗೆ 3,700 ಮರಗಳನ್ನು  ನಗರದ ಲಾಲ್‌ಭಾಗ್‌, ಕಬನ್‌ ಪಾರ್ಕ್‌, ಕೆಂಪೇಗೌಡ ಬಡಾವಣೆ ಸೇರಿದಂತೆ ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. 

ಈ ಯೋಜನೆಯಿಂದ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಜಾಗೃತಿ ವಹಿಸಲಾಗುವುದು. ಈಗಾಗಲೇ ಈ ಯೋಜನೆ ವಿಸ್ತೃತ ಯೋಜನಾ ವರದಿಯನ್ನು ಸಾರ್ವಜನಿಕರ ಆಕ್ಷೇಪಣೆಗೆ ನೀಡಲಾಗಿದ್ದು, ಈ ಯೋಜನೆಯಿಂದ ಏನಾದರೂ ಸಮಸ್ಯೆ ಇದ್ದರೆ, ಸಾರ್ವಜನಿಕರು ಮುಕ್ತವಾಗಿ ತಮ್ಮೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಬಹದು.

Advertisement

ಈ ಯೋಜನೆಯಿಂದ ಬೆಂಗಳೂರಿಗರಿಗೆ ಯಾವುದೇ ಅನುಕೂಲ ಇಲ್ಲ ಎಂಬ ಅಭಿಪ್ರಾಯ ಕೆಲವರಿಗೆ ಇದೆ. ಎಲ್ಲರ ಸಂಶಯಗಳನ್ನು ಬಗೆ ಹರಿಸಲು ಸರ್ಕಾರ ಮುಕ್ತವಾಗಿದೆ. ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹೆಚ್ಚಿನ ಹಾನಿಯಾಗದಂತೆ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದ್ದು,

ಖಾಸಗಿ ಆಸ್ತಿಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಲು ಕೆಲವು ಕಡೆಗಳಲ್ಲಿ 6 ಪಥದ ಬದಲು 4 ಪಥಗಳನ್ನು ಮಾತ್ರ ಮಾಡಲು ನಿರ್ಧರಿಸಲಾಗಿದೆ.  ಟ್ರಾಫಿಕ್‌ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮೆಟ್ರೋ ಇಂಟರ್‌ ಲಿಂಕ್‌ ಮಾಡಲು ಡಬಲ್‌ ಡೆಕ್ಕರ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಮೆಟ್ರೋ ಯೋಜನೆಗೂ ಈ ಯೋಜನೆಗೆ ಸಂಬಂಧವಿಲ್ಲ ಎಂದು ಹೇಳಿದರು.

ನಗರದ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಈಗಾಗಲೇ 17 ಸಾವಿರ ಕೋಟಿ ವೆಚ್ಚದಲ್ಲಿ ಪೆರಿಪೆರೆಲ್‌ ರಿಂಗ್‌ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಭೂ ಸ್ವಾಧೀನಕ್ಕೆ 4500 ಕೋಟಿ ರೂಪಾಯಿ ಬಿಡುಗಡೆಗೆ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಯಾವುದೇ ರೀತಿಯ ಟೋಲ್‌ ಸಂಗ್ರಹ ಮಾಡುವುದಿಲ್ಲ. ಸರ್ಕಾರ ನಗರದ ಜನತೆಯ ಮುಕ್ತ ಸಂಚಾರಕ್ಕಾಗಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ಅನಗತ್ಯ ಗೊಂದಲ ಸೃಷ್ಠಿಸಿ ಯೋಜನೆ ವಿಳಂಬಕ್ಕೆ ಕಾರಣವಾಗದಂತೆ ಸಹಕರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು. 

ಅವ್ಯವಹಾರದ ಮಾಹಿತಿ ಪಡೆಯಲು ಸೂಚನೆ: ವಿದ್ಯುತ್‌ ಚಾಲಿತ ಬಸ್‌ಗಳ ಖರೀದಿಯಲ್ಲಿ ಅಧಿಕಾರಿಗಳು ಮತ್ತು ಸಚಿವರ ನಡುವೆ ಗೊಂದಲ ಉಂಟಾಗಿರುವುದರಿಂದ ಈ ಬಗ್ಗೆ ಮಾಹಿತಿ ಪಡೆಯುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

​​​​​​​ರಾಜ್ಯ ಸರ್ಕಾರ ಖರೀದಿಸಲು ಮುಂದಾಗಿದ್ದ ಎಲೆಕ್ಟ್ರಾನಿಕ್‌ ಬಸ್‌ಗಳ ತಯಾರಿಕಾ ಸಂಸ್ಥೆಯನ್ನು ಆಂಧ್ರ ಪ್ರದೇಶದಲ್ಲಿ ಬ್ಲಾಕ್‌ಲಿಸ್ಟ್‌ಗೆ ಸೇರಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆಯೂ ಸ್ಪಷ್ಟ ವರದಿ ಪಡೆಯುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಯೋಜನೆಯ ವಿವರ
ಉತ್ತರ ದಕ್ಷಿಣ ಕಾರಿಡಾರ್‌
-ಹೆಬ್ಟಾಳದಿಂದ ಸಿಲ್ಕ್ ಬೋರ್ಡ್‌ ಜಂಕ್ಸನ್‌ವರೆಗೆ 6 ಪಥ ರಸ್ತೆ. 
-26.89 ಕಿ.ಮೀ. ಉದ್ದ, 7224 ಕೋಟಿ ರೂ. ವೆಚ್ಚ.

ಪೂರ್ವ-ಪಶ್ಚಿಮ ಕಾರಿಡಾರ್‌
-ಕೆ.ಆರ್‌.ಪುರಂನಿಂದ ಗೊರಗುಂಟೆ ಪಾಳ್ಯ 4 ಪಥ ರಸ್ತೆ
-20.9 ಕಿ.ಮೀ. ರಸ್ತೆ, 6245 ಕೋಟಿ ರೂ. ವೆಚ್ಚ.

ಪೂರ್ವ-ಪಶ್ಚಿಮ ಕಾರಿಡಾರ್‌ 2
-ವರ್ತೂರು ಗೇಟ್‌ನಿಂದ ಮೈಸೂರು ರಸ್ತೆವರೆಗೆ
-29.48 ಕಿ.ಮೀ.ರಸ್ತೆ 7083 ಕೋಟಿ ರೂಪಾಯಿ ವೆಚ್ಚ. 

ಸಂಪರ್ಕ ಕಾರಿಡಾರ್‌
-ಸೇಂಟ್‌ ಜಾನ್ಸ್‌ ಕಾಲೇಜಿನಿಂದ ಆಗರವರೆಗೆ
-4.48 ಕಿ.ಮೀ. ರಸ್ತೆ, 826 ಕೋಟಿ ರೂ. ವೆಚ್ಚ

ಹಲಸೂರಿನಿಂದ ಡಿಸೋಜಾ ವೃತ್ತದವರೆಗೆ
-2.8 ಕಿ.ಮೀ. ರಸ್ತೆ, 733 ಕೋಟಿ ರೂ. ವೆಚ್ಚ.

ವೀಲರ್ ಜಂಕ್ಸನ್‌ನಿಂದ ಕಲ್ಯಾಣ ನಗರವರೆಗೆ
-6.46 ಕಿ.ಮೀ. ರಸ್ತೆ, 1653 ಕೋಟಿ ರೂ. ವೆಚ್ಚ. 

ರಾಮಮೂರ್ತಿ ನಗರದಿಂದ ಐಟಿಪಿಎಲ್‌ವರೆಗೆ
-10.99 ಕಿ.ಮೀ. ರಸ್ತೆ, 1731 ಕೋಟಿ ರೂ. ವೆಚ್ಚ. 

Advertisement

Udayavani is now on Telegram. Click here to join our channel and stay updated with the latest news.

Next