ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ- ಚಿನ್ನಹಳ್ಳಿ ರಸ್ತೆ ಮಧ್ಯದಲ್ಲೆ ಒಂಟಿಸಲಗವೊಂದು ಹಾಡಹಗಲೇ ರಾಜರೋಷವಾಗಿ ಅಡ್ಡಬಂದ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಆಗಿ ಸವಾರರು ಪರದಾಟ ನಡೆಸಿದರು.
ತಾಲೂಕಿನ ಬಾಳ್ಳುಪೇಟೆಯಿಂದ ಆಲೂರು ತಾಲೂಕಿನ ಚಿನ್ನಹಳ್ಳಿ ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯಲ್ಲಿ ದಿನ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಒಂಟಿಸಲಗವೊಂದು ರಸ್ತೆ ಮಧ್ಯದಲ್ಲೆ ಬಂದಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ತಗಿತಗೊಂಡಿತ್ತು.
ಇದನ್ನೂ ಓದಿ: ಮೂರು ತಿಂಗಳಾದ್ರೂ ಕಳ್ಳರ ಬಂಧನ ಇಲ್ಲ
ಆಲೂರು ತಾಲೂಕು ದುವನಹಳ್ಳಿ ಗ್ರಾಮ ಸಮೀಪದ ಕಾಫಿ ತೋಟದಿಂದ ಜಿಲ್ಲಾ ಮುಖ್ಯ ರಸ್ತೆಗೆ ಬಂದ ಒಂಟಿ ಸಲಗ ಬನವಾಸೆ ಗ್ರಾಮ ಸಮೀಪದವರಗೆ ನಿಧಾನಗತಿಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ 3 ಕಿ.ಮೀ ದೂರದವರಗೆ ನಡುರಸ್ತೆಯಲ್ಲಿ ಹೆಜ್ಜೆಹಾಕಿದ್ದರಿಂದಾಗಿ ರಸ್ತೆ ಸಂಚಾರ ಬಂದ್ ಆಗಿತ್ತು.
ಕಾಡಾನೆ ಎದುರು ಬರುತಿರುವುದು ತಿಳಿಯದೆ ಬಂದ ಸ್ಕೂಟರ್ ಸವಾರನೋರ್ವ ಕಾಡಾನೆ ಕಂಡು ಬೈಕ್ ಸ್ಥಳದಲ್ಲೆ ಬಿಟ್ಟು ಕಾಫಿ ತೋಟಕ್ಕೆ ನುಗ್ಗಿ ಜೀವ ಉಳಿಸಿಕೊಂಡರೆ, ಸಲಗ ಕಂಡ ವ್ಯಾನ್ ಚಾಲಕ ತರಾತುರಿಯಲ್ಲಿ ವಾಪಸ್ ತಿರಿಗಿಸಲು ಪ್ರಯತ್ನಿಸಿ ರಸ್ತೆಬದಿಯ ಹೊಂಡಕ್ಕೆ ಬೀಳಿಸಿದರು. ಆದರೆ, ಒಂಟಿ ಸಲಗ, ಸ್ಕೂಟರ್ ಹಾಗೂ ವ್ಯಾನ್‌ಗೆ ಯಾವುದೆ ಧಕ್ಕೆ ಮಾಡದೆ ತೆರಳಿತು. ಇನ್ನೇನು ಬನವಾಸೆ ಗ್ರಾಮಕ್ಕೆ ನುಗ್ಗಲಿದೆ ಎನ್ನುವ ವೇಳೆಗೆ ಗ್ರಾಮ ಹೊರವಲಯದ ದಿಣ್ಣೆಗೆ ಹತ್ತಿ ಕಣ್ಮರೆಯಾಯಿತು. ಚಿನ್ನಹಳ್ಳಿ, ರಾಜೇಂದ್ರಪುರ, ಅಬ್ಬನ, ಬಾಳ್ಳುಪೇಟೆ ಸುತ್ತಮುತ್ತಲಿನ ಜನ ಆತಂಕಕ್ಕೆ ಈಡಾಗಿದ್ದಾರೆ. ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದರು ಸಹ ಯಾವುದೆ ಸರ್ಕಾರಗಳು ಸ್ಪಂದಿಸಿಲ್ಲ