Advertisement
ಮೊಹಮ್ಮದ್ ಫೈಜನ್ ಹಾಗೂ ಅಬುರ್ ಉವೈಸ್ ಸಹೋದರರು ಕಾಡಾನೆ ದಾಳಿಯಿಂದ ಗಾಯಗೊಂಡಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗ್ಗಿನ ಜಾವ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ. ಈ ಸಂದರ್ಭ ಸಹೋದರರು ಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿದೆ. ಇಬ್ಬರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ಕಳೆದ ಎರಡು ದಶಕಗಳಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿ ಹೆಚ್ಚುತ್ತಿದೆ. ಅದರಲ್ಲೂ ನಾಗರಹೊಳೆ ಅರಣ್ಯದ ಅಂಚಿನ ದಕ್ಷಿಣ ಕೊಡಗಿನ ಗ್ರಾಮೀಣ ಭಾಗಗಳು ಕಾಡಾನೆ ಹಾವಳಿಯಿಂದ ನಲುಗಿವೆ. ಇಲ್ಲಿನ ಗ್ರಾಮೀಣರು ಕಾಡಾನೆ ಹಾವಳಿಯಿಂದ ಜೀವ ಮತ್ತು ಕೃಷಿ ಫಸಲನ್ನು ಕಳೆದುಕೊಳ್ಳುತ್ತಿದ್ದಾರೆ. ನೂರಾರು ಕಾಡಾನೆಗಳು ದಕ್ಷಿಣ ಕೊಡಗಿನ ಕಾಫಿ ತೋಟಗಳನ್ನೇ ತಮ್ಮ ನೆಲೆಯನ್ನಾಗಿಸಿಕೊಂಡಿವೆ. ಇವುಗಳನ್ನು ಅರಣ್ಯಕ್ಕೆ ಅಟ್ಟುವ ಸಾಕಷ್ಟು ಪ್ರಯತ್ನಗಳನ್ನು ಅರಣ್ಯ ಇಲಾಖೆ ನಡೆಸಿದೆ. ಅರಣ್ಯಕ್ಕೆ ಅಟ್ಟಲ್ಪಟ್ಟ ಕಾಡಾನೆಗಳು ಮರಳಿ ತೋಟಗಳಿಗೆ ಆಗಮಿಸುತ್ತಿರುವುದು ಸಮಸ್ಯೆ ಬಗೆಹರಿಯದೆ ಇರಲು ಕಾರಣವಾಗಿದೆ.
Related Articles
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರಿಗೆ ಸಾಂತ್ವನ ಹೇಳಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Advertisement
ತೋಟಗಳಲ್ಲಿ ನೆಲೆ ನಿಂತು ನಿರಂತರ ಜೀವ ಮತ್ತು ಬೆಳೆಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವ ಪ್ರಯತ್ನ ಸರಕಾರದ ಮೂಲಕ ನಡೆಯುತ್ತಿದೆ ಎಂದರು.
ಕೊಡಗು, ಚಿಕ್ಕಮಗಳೂರು, ಹಾಸನ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಗುರುತಿಸಿ ಅವುಗಳಿಗೆ ಪುನರ್ವಸತಿ ಒದಗಿಸಬೇಕಾಗಿದೆ. ಇದಕ್ಕೆ ಅಗತ್ಯ ಜಾಗವನ್ನು ಗುರುತಿಸುವ ನಿಟ್ಟಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈಗಾಗಲೇ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಎರಡು ಮೂರು ವರ್ಷಗಳ ಕಾಲಾವಧಿ ಬೇಕಾಗಬಹುದೆಂದು ಸಂಕೇತ್ ತಿಳಿಸಿದರು