Advertisement

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

11:49 PM May 19, 2024 | Team Udayavani |

ಚಾಮರಾಜನಗರ: ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಗಡಿಭಾಗಗಳಲ್ಲಿ ಇದೇ ಮೊದಲ ಬಾರಿಗೆ ಮೇ 23ರಿಂದ ಮೂರು ದಿನಗಳ ಕಾಲ ಆನೆಗಳ ಗಣತಿ ಕಾರ್ಯ ನಡೆಯಲಿದೆ.

Advertisement

ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ದೇಶದ ಎಲ್ಲ ರಾಜ್ಯಗಳಲ್ಲಿ ಆನೆಗಣತಿ ನಡೆಸಲಾಗುತ್ತದೆ. ಆದರೆ ಈ ಬಾರಿ ದಕ್ಷಿಣ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಮಾತ್ರ ಆನೆಗಳ ಗಣತಿ ನಡೆಯುತ್ತಿದೆ. ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಅಧಿಕಾರಿಗಳನ್ನು ಒಳಗೊಂಡ ಅಂತಾರಾಜ್ಯ ಸಮನ್ವಯ ಸಮಿತಿ ನಡೆಸಿದ ಸಭೆಯ ನಿರ್ಧಾರದಂತೆ ಈ ಗಣತಿ ನಡೆಸಲಾಗುತ್ತಿದೆ.

ಈ ಗಣತಿ ಪ್ರಕ್ರಿಯೆ ಮೂಲಕ ಆನೆಗಳ ಆವಾಸ ಸ್ಥಾನ, ಮಾನವ ಪ್ರಾಣಿ ಸಂಘರ್ಷವನ್ನು ಕಡಿಮೆಗೊಳಿಸುವ ಮತ್ತು ಐದು ರಾಜ್ಯಗಳು ಉತ್ತಮ ಸಮನ್ವಯ ಸಾಧಿಸಲು, ಉತ್ತಮ ಯೋಜನೆಗಳನ್ನು ರೂಪಿಸುವ ಗುರಿ ಹೊಂದಿವೆ ಎಂದು ಹಿರಿಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಹಾಸನ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು, ಬಂಡೀಪುರ ಅರಣ್ಯದಲ್ಲಿ ಬಿಡಲಾಗಿದ್ದ ದಂತ ರಹಿತ ಗಂಡಾನೆ ಆನೆ ಕೇರಳದ ವಯನಾಡು ಅರಣ್ಯದಲ್ಲಿ ಓರ್ವನನ್ನು ಕೊಂದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಮಾ.19ರಂದು ಅಂತಾರಾಜ್ಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ವನ್ಯಜೀವಿ ವಾರ್ಡನ್‌ಗಳು ಮತ್ತು ಹಿರಿಯ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.

ಅದರಂತೆ ಮೇ 23, 24 ಮತ್ತು 25ರಂದು ಈ ರಾಜ್ಯಗಳ ಗಡಿಭಾಗದ ಅರಣ್ಯಗಳಲ್ಲಿ ಆನೆಗಳ ಗಣತಿ ನಡೆಸಲಾಗುತ್ತಿದೆ. ಆನೆ ಮತ್ತು ಮಾನವ ಸಂಘರ್ಷದ ಪ್ರದೇಶಗಳು° ಗುರುತಿಸಲು ಮತ್ತು ಇದಕ್ಕೆ ಸೂಕ್ತ ಪರಿಹಾರವನ್ನು ಕಂಡು ಹಿಡಿಯಲು ಈ ಆನೆಗಣತಿ ನಡೆಸಲಾಗುತ್ತಿದೆ. ಈ ಗಣತಿ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ಗಣತಿಯ ವಿಧಾನ
ಮೇ 23ರಂದು ಮೊದಲ ದಿನ ನೇರ ಎಣಿಕೆ ಪದ್ಧತಿ, 24ರಂದು ಆನೆಗಳ ಲದ್ದಿಗಳ ಮೂಲಕ ಎಣಿಕೆ, 25ರಂದು ನೀರು ಕುಡಿಯಲು ಬರುವ ಜಾಗಗಳಲ್ಲಿ ಎಣಿಕೆ ಮೂಲಕ ಗಣತಿ ನಡೆಸಲಾಗುತ್ತದೆ. ತಂಡಗಳಲ್ಲಿ ಗಣತಿ ಎಣಿಕೆ ಕಾರ್ಯ ನಡೆಯಲಿದೆ. ಒಂದು ತಂಡ ನಿಗದಿತ ಪ್ರದೇಶದ 15 ಕಿ.ಮೀ. ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿ ಗಣತಿ ನಡೆಸುತ್ತದೆ. ಅರಣ್ಯ ಸಿಬಂದಿ ಈ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರಿಗೆ ಒಂದು ಸುತ್ತಿನ ತರಬೇತಿಯನ್ನೂ ನೀಡಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಗಣತಿ ಕಾರ್ಯ ನಡೆಯಲಿದೆ. ಆನೆಗಳ ವಯಸ್ಸು, ಲಿಂಗ, ದಂತ ಮತ್ತು ದಂತ ರಹಿತ ಗಂಡಾನೆ (ಮಕನ) ಸಂಖ್ಯೆಯನ್ನೂ ಈ ಗಣತಿ ಮೂಲಕ ನಿರ್ಣಯಿಸಲಾಗುತ್ತದೆ.

953 ಆನೆಗಳು ಸಂರಕ್ಷಿತ ಪ್ರದೇಶದಿಂದ ಹೊರಗೆ
ರಾಜ್ಯದಲ್ಲಿ ಆನೆಗಳು 14 ಸಂರಕ್ಷಿತ ಪ್ರದೇಶಗಳಲ್ಲಿ ಹಂಚಿ ಹೋಗಿವೆ. ಶೇ.82ರಷ್ಟು ಆನೆಗಳು ಈ ಸಂರಕ್ಷಿತ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಶೇ.18ರಷ್ಟು ಆನೆಗಳು ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಹೊರಗಿವೆ. 2023ರ ಗಣತಿ ಪ್ರಕಾರ ಇಂಥ 953 ಆನೆಗಳಿವೆ. ಈ ಪ್ರದೇಶಗಳು ಆನೆಗಳ ಆವಾಸಕ್ಕೆ ಸುರಕ್ಷಿತವಾಗಿಲ್ಲ. ಕಳೆದ ಗಣತಿಯಲ್ಲಿ ಪತ್ತೆಯಾದ 6,395 ಆನೆಗಳ ಪೈಕಿ 161 ಆನೆಗಳು ಖಾಸಗಿಯವರ ಜಾಗಗಳಲ್ಲಿ (ಜಮೀನು, ಕಾಫಿ ಎಸ್ಟೇಟುಗಳಲ್ಲಿ) ಕಂಡು ಬಂದಿವೆ. ಇವುಗಳ ಸಂರಕ್ಷಣೆ ಅರಣ್ಯ ಇಲಾಖೆಗೆ ಸವಾಲಾಗಿದೆ. ಇವಲ್ಲದೆ, 792 ಆನೆಗಳು ಅರಣ್ಯ ಪ್ರದೇಶದಲ್ಲೆ ಇದ್ದರೂ, ಅವು ಸಾಂಪ್ರದಾಯಿಕ ಸಂರಕ್ಷಣ ವ್ಯಾಪ್ತಿಯಲ್ಲಿಲ್ಲ. ಆದರೂ ಇವು ಖಾಸಗಿ ಜಾಗಗಳಿಗೆ ಹೋಲಿಸಿದರೆ ಸುರಕ್ಷಿತವಾಗಿವೆ ಎಂದು ಗಣತಿಯ ವರದಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ರಾಜ್ಯಗಳ ಆನೆಗಳ ಗಣತಿ ಕಾರ್ಯ ಮೇ 23ರಿಂದ ಆರಂಭವಾಗಲಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 150 ಮಂದಿ ಅರಣ್ಯ ಸಿಬಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅವರಿಗೆ ತರಬೇತಿಯನ್ನೂ ನೀಡಲಾಗಿದೆ.
-ಪ್ರಭಾಕರನ್‌,
ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next