Advertisement

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

11:31 PM May 28, 2024 | Team Udayavani |

ಮಂಗಳೂರು/ ಉಡುಪಿ: ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮುನ್ಸೂಚನೆ ಪ್ರಕಾರ ಮುಂದಿನ ಮೂರ್‍ನಾಲ್ಕು ದಿನಗಳ ಒಳಗಾಗಿ ಮುಂಗಾರು ಕೇರಳ ಪ್ರವೇಶಿಸಲಿದೆ.

Advertisement

ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.ಕರಾವಳಿ ಭಾಗದಲ್ಲಿ ಮೇ 29 ಮತ್ತು 30ರಂದು “ಎಲ್ಲೋ ಅಲರ್ಟ್‌’ ಘೋಷಿಸಲಾಗಿದ್ದು, ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ.

ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವೂ ಕಡಿಮೆಯಾಗಿದ್ದು, ಮಂಗಳವಾರ 31.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.4 ಡಿ.ಸೆ. ಕಡಿಮೆ ಇತ್ತು. 26.7 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು.

ಸಾಧಾರಣ ಮಳೆ
ದ.ಕ. ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಹಲವೆಡೆ ಸಣ್ಣದಾಗಿ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಮೋಡ, ಬಿಸಿಲು ವಾತಾವರಣ ನಡುವೆ ಕೆಲಕಾಲ ಹನಿಹನಿ ಮಳೆಯಾಗಿದೆ. ಬಿಸಿಲು-ಮೋಡದ ನಡುವೆಯೂ ಸೆಕೆಯ ಪ್ರಮಾಣ ಹೆಚ್ಚಿತ್ತು.

ಮಹಾಮಳೆಗೆ 6 ವರ್ಷ
ಕರಾವಳಿಯಲ್ಲಿ 2018ರ ಮೇ 29ರಂದು ಭಾರೀ ಮಳೆ ಸುರಿದಿತ್ತು. ದಿನವಿಡೀ ಸುರಿದ ಬಿರುಸಿನ ಮಳೆಗೆ ಮಂಗಳೂರು ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಬ್ಬರದ ಮಳೆ ನಗರದ ಇಬ್ಬರನ್ನು ಬಲಿ ಪಡೆದುಕೊಂಡಿತ್ತು. ಜಿಲ್ಲೆಯಲ್ಲಿ ಕೇವಲ ಆರು ಗಂಟೆಯಲ್ಲಿ 36.8 ಸೆಂ.ಮೀ. ಮಳೆಯಾಗಿ ಸುಮಾರು 560 ಮನೆಗೆ ಹಾನಿ ಉಂಟಾಗಿತ್ತು. 20.47 ಕೋಟಿ ರೂ. ನಷ್ಟ ಉಂಟಾಗಿತ್ತು.

Advertisement

ವಾರದೊಳಗೆ ಎನ್‌ಡಿಆರ್‌ಎಫ್‌
ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್‌ (ತುರ್ತು ನಾಗರಿಕ ಸ್ಪಂದನಾ ತಂಡ) ತಂಡ ವಾರದೊಳಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ. ವಿಜಯವಾಡದ 10ನೇ ಬೆಟಾಲಿಯನ್‌ನಿಂದ ಈ ತಂಡ ಆಗಮಿಸಲಿದೆ. ಸದ್ಯ 25 ಮಂದಿಯ ಎಸ್‌ಡಿಆರ್‌ಎಫ್‌ ತಂಡ ಸದ್ಯ ಮಂಗಳೂರಿನಲ್ಲಿ ಸನ್ನದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next