Advertisement
ಸಾಮಾನ್ಯವಾಗಿ ಬೇಸಗೆ ಬರುತ್ತಿದ್ದಂತೆ ಏಕಾಏಕಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿತ್ತು. ಮತ್ತೂಂದೆಡೆ ನಿರೀಕ್ಷಿತ ಉತ್ಪಾದನೆ ಆಗುತ್ತಿರಲಿಲ್ಲ. ಹೀಗಾಗಿ, ಬಿಸಿಲಿನ ಮೊದಲ ಶಾಖ ಇಂಧನ ಇಲಾಖೆಗೇ ತಟ್ಟುತ್ತಿತ್ತು. ಪರಿಣಾಮ ಇಲಾಖೆಯು ಪ್ರತೀ ವರ್ಷ ಮಕ್ಕಳ ಪರೀಕ್ಷೆ ವೇಳೆ ಲೋಡ್‌ಶೆಡ್ಡಿಂಗ್ ಮಂತ್ರ ಪಠಿಸುತ್ತಿತ್ತು. ಆದರೆ, ಈ ಬಾರಿಯ ಬೇಸಗೆಯ ಚಿತ್ರಣ ತದ್ವಿರುದ್ಧವಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ಜತೆಗೆ ಹೆಚ್ಚುವರಿಯಾಗಿರುವುದನ್ನು ಮಾರಾಟ ಮಾಡಿ ಲಾಭ ಕೂಡ ಗಳಿಸುತ್ತಿದೆ.
ರಾಜ್ಯದಲ್ಲಿ ನಿತ್ಯ ಸರಾಸರಿ ವಿದ್ಯುತ್ ಉತ್ಪಾದನೆ 14ರಿಂದ 15 ಸಾವಿರ ಮೆ.ವಾ. ಆಸುಪಾಸು ಇದೆ. ಇದರಲ್ಲಿ ಶೇ. 50ರಷ್ಟು ಸೋಲಾರ್‌ನಿಂದಲೇ ಬರುತ್ತಿದೆ. ಉಳಿದರ್ಧದಲ್ಲಿ ಜಲ, ಶಾಖೋತ್ಪನ್ನ ಮತ್ತು ಪವನದಿಂದ ಪೂರೈಕೆ ಆಗುತ್ತದೆ. ಆ ಸೋಲಾರ್ ವಿದ್ಯುತ್ ಪೀಕ್ ಲೋಡ್‌ನಲ್ಲಿಯೂ (ಬೆಳಗ್ಗೆ 8ರಿಂದ 11) ಬರುವುದರಿಂದ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಶೇ. 20ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಈ ಎಲ್ಲ ಕಾರಣಗಳಿಂದ ಬೇಡಿಕೆ ಇಳಿಮುಖವಾಗಿದೆ.
Related Articles
ನಿತ್ಯ ವಿದ್ಯುತ್ ಬೇಡಿಕೆ ಇರುವುದು 13 ಸಾವಿರ ಮೆ.ವಾ., ಉತ್ಪಾದನೆಯು 14 ಸಾವಿರ ಮೆ.ವಾ. ಇದೆ. ಈ ಹೆಚ್ಚುವರಿ ವಿದ್ಯುತ್ ಅನ್ನು ನೆರೆಯ ತಮಿಳುನಾಡು, ಆಂಧ್ರಪ್ರದೇಶಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ಕಲ್ಲಿದ್ದಲು ಪೂರೈಕೆ ಕೂಡ ಸಮರ್ಪಕವಾಗಿದ್ದು, ಪ್ರತೀದಿನ ಎರಡು-ಮೂರು ದಿನಗಳಿಂದ 12-14 ರೇಕ್‌ಗಳು ಬರುತ್ತಿವೆ. ಕಳೆದ ವಾರ ರಾಜ್ಯಕ್ಕೆ ನಿತ್ಯ 8ರಿಂದ 10 ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿತ್ತು. ಪ್ರಸ್ತುತ ನಾಲ್ಕು ದಿನಗಳಿಗಾಗುವಷ್ಟು ದಾಸ್ತಾನು ಇದೆ.
Advertisement
ಈ ಬಾರಿಯ ಬೇಸಗೆಯಲ್ಲಿ ವಿದ್ಯುತ್ ಉತ್ಪಾದನೆ ಸಮರ್ಪಕವಾಗಷ್ಟೇ ಅಲ್ಲ, ಹೆಚ್ಚುವರಿಯಾಗಿದೆ. ಸುಮಾರು 850ರಿಂದ 1,000 ಮೆ.ವಾ. ವಿದ್ಯುತ್ ಅನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಲಾಭವನ್ನೂ ಗಳಿಸುತ್ತಿದ್ದೇವೆ.– ಕುಮಾರ್ ನಾಯಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ