Advertisement

ರಾಜ್ಯದಲ್ಲಿಲ್ಲ ವಿದ್ಯುತ್‌ ಕೊರತೆ: ಕಾರಜೋಳ

04:30 PM Jul 30, 2022 | Team Udayavani |

ರಾಮದುರ್ಗ: ಸ್ವಾತಂತ್ರ್ಯ ದೊರಕಿ 70 ವರ್ಷಗಳು ಗತಿಸಿದರೂ ದೇಶದ ಎಷ್ಟೋ ಹಳ್ಳಿಗಳಿಗೆ ವಿದ್ಯುತ್‌ ಸಿಗದೆ ಕತ್ತಲಲ್ಲಿ ಬದುಕು ಸಾಗಿಸುವ ಕುಟುಂಬಗಳ ಪರಿಸ್ಥಿತಿ ಅರಿತ ಪ್ರಧಾನಿ ನರೇಂದ್ರ ಮೋದಿಯವರು 3 ವರ್ಷದಲ್ಲಿ 18,700 ಹಳ್ಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಪಟ್ಟಣದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಕೇಂದ್ರ ಹಾಗೂ ರಾಜ್ಯ ಇಂಧನ ಇಲಾಖೆ, ವಿದ್ಯುತ್‌ ಸಚಿವಾಲಯ, ಪಿಜಿಸಿಐಎಲ್‌, ಕೆಪಿಟಿಸಿಎಲ್‌, ಹಾಗೂ ಹೆಸ್ಕಾ ಸಹೋಗದಲ್ಲಿ ಹಮ್ಮಿಕೊಂಡ ವಿದ್ಯುತ್‌ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆಡಳಿತ ವಹಿಸಿಕೊಂಡ ನಂತರ ದೇಶದಲ್ಲಿದ್ದ 2.40 ಲಕ್ಷ ಮೆಗಾವ್ಯಾಟ್‌ ಉತ್ಪಾದನೆಯನ್ನು 4 ಲಕ್ಷ ಮೆಗಾವ್ಯಾಟಗೆ ಹೆಚ್ಚಿಸಿ ದೇಶದಲ್ಲಿ ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟಕ್ಕೂ ವಿದ್ಯುತ್‌ ನೀಡುವ ಮಹತ್ವದ ಕೆಲಸವನ್ನು ಮಾಡಿದೆ. ಇಂದು ರಾಜ್ಯದಲ್ಲಿ ಸಾಕಷ್ಟು ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದು, ಯಾವುದೇ ಕೊರತೆ ಇಲ್ಲ. ಆದರೆ ಕೆಲವು ಕಡೆ ಸಿಸ್ಟಮ್‌ ಇಂಪ್ರೂವ್‌ ಮೆಂಟ್‌ ಅಳವಡಿಕೆ ಇಲ್ಲದ ಕಾರಣ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸದ್ಯದಲ್ಲಿಯೇ ಅವುಗಳೆಲ್ಲವನ್ನು ಸರಿಪಡಿಸಿ ಸಮರ್ಪಕ ವಿದ್ಯುತ್‌ ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ತಂದು ಸಾಮಾನ್ಯ ಜನರ ಬದುಕಿಗೆ ಆಸರೆಯಾಗುತ್ತಿದೆ. ಮುದ್ರಾ ಯೋಜನೆಯ ಮೂಲಕ ಬೆಳಗಾವಿ ಜಿಲ್ಲೆಯ 19.60 ಲಕ್ಷ ಜನರಿಗೆ 12.6 ಸಾವಿರ ಕೋಟಿ ಹಣ ನೀಡಿದೆ. ಅಲ್ಲದೇ ಕಿಸಾನ ಸಮ್ಮಾನ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ರಾಜ್ಯ ಸರಕಾರ ಮಹತ್ವದ ಹೆಜ್ಜೆಯಾಗಿ ಎಸ್‌.ಸಿ ಹಾಗೂ ಎಸ್‌.ಟಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ್‌ ವಿದ್ಯುತ್‌ ನೀಡುವ ಕೆಲಸಕ್ಕೆ ಮುಂದಾಗಿದೆ. ಬೆಳಗಾವಿ, ಬಾಗಲಕೋಟ, ವಿಜಯಪುರ ಮೂರು ಜಿಲ್ಲೆಗಳಲ್ಲಿನ 7 ಲಕ್ಷ ರೈತರ ಪಂಪ್‌ಸೆಟ್‌ ಗಳಿಗೆ ಉಚಿತ ವಿದ್ಯುತ್‌ ನೀಡುತ್ತಿದೆ ಎಂದು ಹೇಳಿದರು.

Advertisement

ಸಂಸದೆ ಮಂಗಲಾ ಅಂಗಡಿ ಮಾತನಾಡಿ, ದಿನದಯಾಳ, ಸೌಭಾಗ್ಯ, ಬೆಳಕು ಯೋಜನೆಗಳ ಮೂಲಕ ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡಿ ದೇಶದ ಅನೇಕ ಬಡ ಕುಟುಂಬಗಳಿಗೆ ಬೆಳಕು ನೀಡುವ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸದಾ ಜನರ ಹಿತಬಯಸಿ ಹಲವಾರು ಯೋಜನೆಗಳನ್ನು ತಂದಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಸುರೇಬಾನ, ಬಟಕುರ್ಕಿ, ಹುಲಕುಂದ, ಚುಂಚನೂರ, ಮುದಕವಿ ಈ ಐದು 33 ಕೆವಿ ಉಪಕೇಂದ್ರಗಳನ್ನು 110 ಕೆವಿ ಗೆ ಮೇಲ್ದರ್ಜೆಗೇರಿಸಲು ಆದ್ಯತೆ ವಹಿಸಲಾಗಿದೆ. ಇನ್ನೂ ತಾಲೂಕಿನ ಅನೇಕ ಭಾಗಗಳಲ್ಲಿ ಹೊಸದಾಗಿ ವಿತರಣಾ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಭೂಮಿ ಖರೀದಿ ಸಮಸ್ಯೆಯಾಗಿದ್ದು, ಕಾರಣ ರೈತರು ಸಹಕಾರ ನೀಡಿದರೆ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಬೆಳಗಾವಿ ಅಧೀಕ್ಷಕ ಇಂಜನಿಯರ್‌ ಗಿರಿಧರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಹುಬ್ಬಳ್ಳಿ ಹೆಸ್ಕಾಂ ಅಧಿಕಾರೇತರ ನಿರ್ದೇಶಕ ಅಣ್ಣಾಸಾಹೇಬ ದೇಸಾಯಿ, ಬೆಳಗಾವಿ ಮುಖ್ಯ ಇಂಜಿನಿಯರ್‌ ಜಿ.ಪಿ. ನಾಗರಾಜ, ಅಧೀಕ್ಷಕ ಇಂಜಿನಿಯರ್‌ ಶ್ರೀಕಾಂತ ಸಸಾಲಟ್ಟಿ, ರಾಮದುರ್ಗ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಹಾಯಕ ಲೆಕ್ಕಾಧಿಕಾರಿ ನರಸಿಂಹ ಮಾನಶೆಟ್ಟಿ ಸ್ವಾಗತಿಸಿದರು. ಕಾರ್ಯನಿರ್ವಾಹಕ ಇಂಜಿನಿಯರ್‌ ಕಿರಣ ಸಣ್ಣಕ್ಕಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next