ತಿಪಟೂರು: ಕೆರೆಗೆ ಹೇಮಾವತಿ ನೀರು ಕೊಡುವ ವರೆಗೆ ಮನೆಗಳಿಗೆ ಸಂಬಂಧಿಸಿದ ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದು ಮೂರು ವರ್ಷದಿಂದ ಕರ ನಿರಾಕರಣೆ ಚಳವಳಿ ನಡೆಸುತ್ತಿದ್ದ ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿ ಸಿದ್ದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಸಂಜೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತೀವ್ರ ಬರ ಪೀಡಿತ ಪ್ರದೇಶವಾದ ಗೌಡನಕಟ್ಟೆ ಗ್ರಾಮದ ಸುತ್ತಮುತ್ತ ಅಂತರ್ಜಲ ಕುಸಿದು ಕೃಷಿ ಕಷ್ಟಕರವಾಗಿದೆ. ಹೇಮಾವತಿ ನಾಲೆಯಿಂದ ತಮ್ಮೂರಿನ ಕೆರೆಗೆ ನೀರು ಹರಿಸಿ ರೈತರಿಗೆ ನೆರ ವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಗ್ರಾಮ ಸ್ಥರು ಮೂರು ವರ್ಷಗಳ ಹಿಂದೆ ವಿದ್ಯುತ್ ಕರ ನಿರಾಕರಣೆ ಚಳವಳಿ ಆರಂಭಿಸಿದ್ದರು. ಯಾವುದೇ ಗ್ರಾಮಸ್ಥರು ವಿದ್ಯುತ್ ಬಿಲ್ ಪಾವತಿಸದೆ ಸರ್ಕಾರಕ್ಕೆ ಸದಾ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದರು. ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ವಿದ್ಯುತ್ ಕಡಿತ ಮಾಡಲು ಯತ್ನಿಸಿದಾಗ ಹಿಮ್ಮೆಟ್ಟಿಸಿದ್ದರು.
ಮುತ್ತಿಗೆ: ಈ ಬಗ್ಗೆ ಬೆಸ್ಕಾಂಗೆ ಆಗಾಗ್ಗೆ ಪತ್ರ ಬರೆದು ಮನವರಿಕೆ ಮಾಡಿಕೊಂಡಿದ್ದರು. ಆದರೆ, ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮದ ಕೆಲ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಬೆಸ್ಕಾಂಗೆ ಮುತ್ತಿಗೆ ಹಾಕಿ ತಕ್ಷಣ ಸಂಪರ್ಕ ಕೊಡುವಂತೆ ಒತ್ತಾಯಿಸಿದರು.
ರೊಚ್ಚಿಗೆದ್ದ ರೈತರು: ಇತ್ತ ರೈತರು ಧರಣಿ ಕುಳಿತಿದ್ದರೆ ಅತ್ತ ಬೆಸ್ಕಾಂ ಅಧಿಕಾರಿಗಳು ಮತ್ತಷ್ಟು ಮನೆಗಳ ಸಂಪರ್ಕ ಕಡಿತ ಮಾಡಿದ್ದು ರೈತರನ್ನು ರೊಚ್ಚಿ ಗೆಬ್ಬಿಸಿತು. ಈ ಸಂದರ್ಭದಲ್ಲಿ ಬೆಸ್ಕಾಂ ಕಚೇರಿಗೆ ಬೀಗ ಹಾಕಲು ರೈತ ಮುಖಂಡರು ಮುಂದಾದರು. ಆಗ ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಟ್ಟಲೇಬೇಕೆಂದು ತಿಳಿಸಿದರು. ಒಪ್ಪದಿದ್ದ ಗ್ರಾಮ ಸ್ಥರು ಇಲಾಖೆಯ ಸಿಬ್ಬಂದಿಯನ್ನು ತಮ್ಮೂರಿಗೆ ಬಿಟ್ಟುಕೊಳ್ಳುವುದಿಲ್ಲ.
ಕೆರೆಗೆ ನೀರು ಹರಿಸಿದ ದಿನವೇ ಬಾಕಿ ಇರುವ ಎಲ್ಲಾ ವಿದ್ಯುತ್ ಬಿಲ್ ಪಾವತಿ ಸುವುದಾಗಿ ತಿಳಿಸಿದ್ದರೂ ಸಂಪರ್ಕ ತಪ್ಪಿಸಲು ಪ್ರಯತ್ನಿಸಿದ್ದೀರಿ. ಇದು ಮುಂದುವರಿದರೆ ರೈತರೇ ತಮ್ಮ ಮನೆಗಳ ಮೀಟರ್‌ಗಳನ್ನು ಕಿತ್ತು ತಂದು ಇಲಾಖೆಗೆ ಕೊಡುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದರು. ರೈತ ಮುಖಂಡ ಬಿ.ಎಸ್.ದೇವರಾಜು ಮಾತನಾಡಿ, ಕೆರೆಗೆ ನೀರು ಹರಿಸುವವರೆಗೆ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಪಾವತಿಸು ವುದಿಲ್ಲ.
ಮತ್ತೂಮ್ಮೆ ಸಂಪರ್ಕ ಕಡಿತಕ್ಕೆ ಮುಂದಾದರೆ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು. ಹಸಿರು ಸೇನೆ ಅಧ್ಯಕ್ಷ ಟಿ.ಎಸ್. ದೇವರಾಜು, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಯೋಗಾನಂದಸ್ವಾಮಿ, ಬೆಲೆಕಾವಲು ಸಮಿತಿಯ ಶ್ರೀಕಾಂತ್, ಮನೋಹರ್ ಪಟೇಲ್, ಚೇತನ್, ಸಿದ್ದೇಶ್ ಸೇರಿದಂತೆ ಅಪಾರ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.